-ಎಂ. ವಿಶ್ವನಾಥನ್, ಅಷ್ಟಗ್ರಾಮ ಲೇಔಟ್
ಹೆಣ್ಣುಮಕ್ಕಳಿಗೆ ಗಂಡುಮಕ್ಕಳಂತೆಯೇ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲಿದೆ ಎಂದಿದ್ದೀರಿ. ಹೆಣ್ಣುಮಕ್ಕಳ ಮದುವೆಗೆ ಪಿತ್ರಾರ್ಜಿತ ಆಸ್ತಿಯ ಭಾಗವನ್ನು ಉಪಯೋಗಿಸಬಹುದು ಎಂದಿದ್ದೀರಿ. ನರ್ಸಿಂಗ್‌ಹೋಂ ಖರ್ಚಿಗೂ ಉಪಯೋಗಿಸಬಹುದೆ?
- ಮೇಲ್ಕಂಡ ವಿಷಯದ ಬಗ್ಗೆ ಈ ವಿಭಾಗದಲ್ಲಿ ನನ್ನಿಂದ ಪ್ರಕಟವಾಗಿಲ್ಲ. ಒಟ್ಟು ಕುಟುಂಬದ ಆದಾಯದಲ್ಲಿ ಸದಸ್ಯರ ಎಲ್ಲ ಖರ್ಚನ್ನೂ ಭರಿಸಬೇಕು. ಆದಾಯವಿಲ್ಲದಿದ್ದರೆ ಆಸ್ತಿಯಲ್ಲಿ ಆ ಸದಸ್ಯರ ಪಾಲನ್ನು ಪಡೆದು ಯಾವುದಕ್ಕೆ ಬೇಕಾದರೂ ಉಪಯೋಗಿಸಬಹುದು.
ಈಗಲೂ ಪರಿವರ್ತನೆ ಮಾಡಿಸಿಕೊಳ್ಳಬಹುದು
-ಹೆಸರು ಬೇಡ, ಊರು ಬೇಡ
ತಂದೆಯ ಕಾಲಾನಂತರ ನನ್ನ ಪಾಲಿಗೆ 33 ಗುಂಟೆ ಜಮೀನು ಬಂದಿದ್ದು, ಈ ಜಾಗವನ್ನು ಎರಡು ದೊಡ್ಡ ಸೈಟುಗಳಾಗಿ ನನ್ನ ಹೆಸರಿನಲ್ಲೇ ಪುರಸಭೆಯಲ್ಲಿ ಖಾತೆಯಾಗಿದೆ. ಈಗ ನಾನು ಮೆಜಾರಿಟಿಗೆ ಬಂದಿದ್ದೇನೆ. ದಾಖಲೆಗಳಂತೆ ಆ ಜಾಗ ಇನ್ನೂ ಏಲಿಯನೇಷನ್ (ಪರಿವರ್ತನೆ) ಆಗಿಲ್ಲ. ಇದರಿಂದ ತೊಂದರೆ ಇಲ್ಲವೇ?
- ಮಾರಾಟ ಮಾಡಬೇಕಾದಾಗ ಅಥವಾ ಕಟ್ಟಡ ಕಟ್ಟುವಾಗ ಈ ಸಮಸ್ಯೆ ಉದ್ಭವವಾಗುತ್ತದೆ. ಆದರೆ ನೀವು ಈಗಲೂ ಡಿ.ಸಿ.ಯವರಿಗೆ ಅರ್ಜಿ ಸಲ್ಲಿಸಿ ಏಲಿಯನೇಷನ್ ಮಾಡಿಸಿಕೊಳ್ಳಬಹುದು.
ಪರಭಾರೆ ಮಾಡದಂತೆ ತಡೆಯಾಜ್ಞೆ ಪಡೆಯಿರಿ
-ಹೆಸರು ಬೇಡ, ತುಮಕೂರು
ಅಣ್ಣತಮ್ಮಂದಿರು ಇನಾಮ್ ಜಮೀನನ್ನು ಉಪವಿಭಾಗಾಧಿಕಾರಿಗಳಿಂದ 1976ರಲ್ಲಿ ಸಮನಾಗಿ ಹಂಚಿಕೆ ಮಾಡಿಕೊಂಡಿದ್ದು ಈ ಇಬ್ಬರ ಮರಣದ ನಂತರ ಅವರ ಮಕ್ಕಳು ತಮ್ಮ ತಮ್ಮ ಹಿಸ್ಸೆಗೆ ಜಗಳವಾಡಿಕೊಂಡು ವಿಷಯ ಕೋರ್ಟಿನಲ್ಲಿದೆ. ಈ ಮಧ್ಯೆ ಕೆಲವು ಜನರು ಇವರಿಂದ ಜಮೀನನ್ನು ಕ್ರಯಕ್ಕೆ ಪಡೆಯಲು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ 1976ರ ಮಂಜೂರಾತಿಯಲ್ಲಿ ಸರ್ಕಾರದ ಅನುಮತಿಯಿಲ್ಲದೇ ಪರಭಾರೆ ಮಾಡಿದರೆ ಜಮೀನು ಸರ್ಕಾರಕ್ಕೆ ಹೋಗುತ್ತದೆ ಎಂದಿದೆ. ಇದರಿಂದ ಬೇರೆ ಬೇರೆ ಹಕ್ಕುದಾರರಿಗೆ ಅನ್ಯಾಯವಾಗುತ್ತದೆ. ಪರಿಹಾರವೇನು?
- ಸಂಬಂಧಿಸಿದ ಹಕ್ಕುದಾರರು ತಹಸೀಲ್ದಾರರಿಗೂ, ಉಪವಿಭಾಗಾಧಿಕಾರಿಗಳಿಗೂ ಅರ್ಜಿ ಸಲ್ಲಿಸಿ ವಿಷಯವನ್ನು ಅವರ ಗಮನಕ್ಕೆ ತನ್ನಿ. ಜತೆಗೆ ಸಂಬಂಧಿಸಿದ ಕೋರ್ಟಿಗೂ ಅರ್ಜಿ ಸಲ್ಲಿಸಿ ವಾದಿ-ಪ್ರತಿವಾದಿಗಳು ಯಾರೂ ಜಮೀನನ್ನು ಪರಭಾರೆ ಮಾಡದಂತೆ ಪ್ರತಿಬಂಧಕಾಜ್ಞೆ ಪಡೆಯಿರಿ.
2004ಕ್ಕಿಂತ ಮೊದಲು ಈ ಕಾನೂನು ಅನ್ವಯಿಸುವುದಿಲ್ಲ
-ಹೆಸರು ಬೇಡ, ಹೊಳೆನರಸೀಪುರ
ತಂದೆಗೆ ಎಂಟು ಜನ ಮಕ್ಕಳಿದ್ದು, ತಂದೆ ಮರಣ ಹೊಂದಿರುತ್ತಾರೆ. ತೀರಿಹೋದ ಮಗಳ ಮಕ್ಕಳು ನಮ್ಮ ತಂದೆ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ. ತಂದೆಯ ಆಸ್ತಿ ಗಂಡುಮಕ್ಕಳಿಗೆ ಈಗಾಗಲೇ ವಿಭಾಗವಾಗಿದೆ. ಹೆಣ್ಣುಮಕ್ಕಳ ಮಕ್ಕಳಿಗೆ ಈ ಆಸ್ತಿಯಲ್ಲಿ ಭಾಗವಿದೆಯೇ?
- ನಿಮ್ಮ ಆಸ್ತಿ ವಿಭಾಗವು ನೋಂದಣಿಯಾಗಿದ್ದರೆ ಮಾತ್ರ ನಿಮ್ಮ ತಂಗಿಯ ಮಕ್ಕಳು ಹಿಸ್ಸೆ ಕೇಳುವಂತಿಲ್ಲ. ತಿದ್ದುಪಡಿಯಾದ ಕಲಂ 6, ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರಂತೆ 9.9.2005ರಿಂದ ತೀರಿಹೋದ ಹೆಣ್ಣುಮಕ್ಕಳ ಮಕ್ಕಳೂ ತಮ್ಮ ತಾಯಿಯ ಹಿಸ್ಸೆಯನ್ನು ಪಡೆಯಲು ಸ್ವತಂತ್ರರು. ಆದರೆ ಡಿಸೆಂಬರ್ 20, 2004ಕ್ಕಿಂತ ಮೊದಲೇ ನೋಂದಾಯಿತ ವಿಭಾಗ ಮಾರಾಟ ಅಥವಾ ವಿಲ್ ಮೂಲಕ ಆಸ್ತಿ ವಿಲೇವಾರಿಯಾಗಿದ್ದರೆ ಈ ಹೊಸ ಕಾನೂನು ಅನ್ವಯಿಸುವುದಿಲ್ಲ.
= ಎಚ್.ಆರ್. ಕಸ್ತೂರಿರಂಗನ್