

ನವದೆಹಲಿ: ದೇಶದಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಅನುಕ್ರಮವಾಗಿ ಲೀಟರಿಗೆ 1.27 ಹಾಗೂ 1.17 ರುಪಾಯಿಗಳಷ್ಟು ತಗ್ಗಿಸಿರುವುದಾಗಿ ಭಾರತೀಯ ತೈಲ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಶನಿವಾರ ಹೇಳಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿರುವುದರಿಂದ ಆಗಸ್ಟ್ ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗಿದೆ. ಪರಿಷ್ಕೃತ ದರಗಳು ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಪರಿಷ್ಕೃತ ದರದಂತೆ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಲೀಟರಿಗೆ ರು.63.20 ಹಾಗೂ 44.95 ಜಾರಿಯಾಗಲಿದ್ದು, ಇತರೆ ರಾಜ್ಯಗಳಲ್ಲಿ ಮತ್ತು ಆಯಾ ಪ್ರದೇಶಗಳಲ್ಲಿ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ದರದಲ್ಲಿ ವ್ಯತ್ಯಾಸವಾಗಲಿದೆ ಎಂದು ತಿಳಿದುಬಂದಿದೆ.
ವಾರಗಳಿಗೊಮ್ಮೆ ತೈಲ ಮಾರಾಟಗಾರರು ಅಂತಾರಾಷ್ಟ್ರೀಯ ದರಕ್ಕನುಗುಣವಾಗಿ ತೈಲ ಬೆಲೆಗಳನ್ನು ಪರಿಷ್ಕರಿಸುತ್ತಿರುವ ಹಿನ್ನೆಲೆಯಲ್ಲಿ ಆ.15 ರಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಇಳಿಕೆಯಾಗುತ್ತಿವೆ ಎಂದು ತಿಳಿದುಬಂದಿದೆ.