

ಹೈದರಾಬಾದ್: ಮತಕ್ಕಾಗಿ ಹಣ ಹಗರಣದಲ್ಲಿ ಪ್ರಮುಖ ಆರೋಪಿಗಳು ಪ್ರಸ್ತಾಪಿಸಿರುವ `ಬಾಬು', `ಬಾಸ್' ಮತ್ತು `ನಾಯ್ಡು' ಎಂಬ ಹೆಸರುಗಳು ಬೇರ್ಯಾರದ್ದೂ ಅಲ್ಲ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರದೆಂದು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಸಿದ ಆರೋಪ ಪಟ್ಟಿಯೇ ಹೇಳುತ್ತಿದೆ.
ಬುಧವಾರ ಎಸಿಬಿ ಪ್ರಿನ್ಸಿಪಲ್ ಸ್ಪೆಷಲ್ ಜಡ್ಜ್ ಕೋರ್ಟ್‍ಗೆ ಸಲ್ಲಿಸಿದ 29 ಪುಟಗಳ ಆರೋಪಪಟ್ಟಿಯಲ್ಲಿ ಎಸಿಬಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಎಸಿಬಿ, ಹೆಚ್ಚುವರಿ ಆರೋಪಪಟ್ಟಿಯಲ್ಲಿ ಇನ್ನಷ್ಟು ಹೆಸರುಗಳನ್ನು ಸೇರಿಸುವ ಸಾಧ್ಯತೆಯಿದೆ. ಆರೋಪಿಗಳ ಸಂಭಾಷಣೆ ವಿವರ ಮತ್ತು ದೂರುದಾರ ಎಲ್ವಿಸ್ ಸ್ಟೀಫನ್‍ಸನ್ ಹೇಳಿಕೆ ಆಧಾರದಲ್ಲಿ ನಾವು ಆರೋಪಪಟ್ಟಿಯಲ್ಲಿ ಸಿಎಂ ನಾಯ್ಡು ಹೆಸರನ್ನು ಪ್ರಸ್ತಾಪಿಸಿದ್ದೇವೆ ಎಂದೂ ಎಸಿಬಿ ಮಾಹಿತಿ ನೀಡಿದೆ. ಪ್ರಮುಖ ಆರೋಪಿ ಟಿಡಿಪಿ ಶಾಸಕ ಎ. ರೇವಂತ್ ರೆಡ್ಡಿ ಮತ್ತು ಹ್ಯಾರಿ ಸೆಬಾಸ್ಟಿಯನ್ ಅವರು ದೂರವಾಣಿ ಸಂಭಾಷಣೆಯಲ್ಲಿ ಹಲವು ಬಾರಿ ಬಾಸ್, ನಾಯ್ಡು ಎಂಬ ಪದಗಳನ್ನು ಬಳಸಿದ್ದರು.