

ಜೋಧಪುರ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಜೈಲುವಾಸದಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿದ್ದು ಜೂನ್ 20ಕ್ಕೆ ತೀರ್ಪನ್ನು ಕಾಯ್ದಿರಿಸಲಾಗಿದೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅಸಾರಾಂ ಬಾಪುಗೆ ಜಾಮೀನು ನೀಡುವಂತೆ ವಾದ ಮಂಡಿಸಿದ್ದರು. ಅಸಾರಾಂ ಬಾಪು ಪರ ವಾದ ನಡೆಸಿದ ನಂತರ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ , ಸಾಂದರ್ಭಿಕ ಸಾಕ್ಷಿಗಲ ಆಧಾರದ ಮೇಲೆ ಆಸಾರಾಂ ತಪ್ಪಿತಸ್ತ ಎಂಬ ಆರೋಪದಲ್ಲಿ ಅವರನ್ನು ಜೈಲಿನಲ್ಲಿಡಲಾಗಿದೆ. ತಮಗೆ ಸಿಕ್ಕಿರುವ ಸಾಂದರ್ಭಿಕ ಸಾಕ್ಷಿಗಳ ಅಡಿಯಲ್ಲಿ ಆಸಾರಾಂ ಬಾಪು ಪರ ವಾದಿಸಿದ್ದೇನೆ. ಜೂನ್ 20 ಕ್ಕೆ ಜಾಮೀನು ತೀರ್ಪು ಕಾದಿರಿಸಲಾಗಿದೆ. ಅವರಿಗೆ ಒಳ್ಳೆಯದಾಗುತ್ತೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಒಂದು ವೇಳೆ ಅಧೀನ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಸ್ವಾಮಿ ಹೇಳಿದ್ದಾರೆ.
ಇನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಸಿ ಸೋಲಂಕಿ ವಾದ ಮಂಡಿಸಿ, ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು .ಜೋಧ್ ಪುರ ಸೆಷನ್ ಕೋರ್ಟ್ ನ್ಯಾಯಾಧೀಶ ಮನೋಜ್ ಕುಮಾರ್ ವ್ಯಾಸ್ ಎರಡು ಕಡೆಯ ವಾದವನ್ನು ಆಲಿಸಿ ತೀರ್ಪನ್ನು ನಾಳೆಗೆ ಕಾದಿರಿಸಿದ್ದಾರೆ.