

ಬಿರ್ಗುಂಜ್: ಭಾರತ-ನೇಪಾಳ ಗಡಿಯಲ್ಲಿ ಮಾದೇಸಿ ಸಮುದಾಯದ ಜನ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಓರ್ವ ಭಾರತೀಯ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ನೇಪಾಳ ಹೊಸ ಸಂವಿಧಾನವನ್ನು ವಿರೋಧಿಸಿದ್ದ ಮಾದೇಸಿ ಸಮುದಾಯದ ಜನರು ಭಾರತೀಯ ಮೂಲದ ಜನರ ಹಿತಕಾಯುವುದಾಗಿ ಹೇಳಿ ಭಾರತ-ನೇಪಾಳ ಗಡಿಯ ಪ್ರಮುಖ ವ್ಯಾಪಾರ ವಹಿವಾಟಿನ ಸರಕು ಸಾಗಣೆ ಮಾರ್ಗದ ಮೇಚಿ ಸೇತುವೆ ಬಳಿ ಸರಕು ಸಾಗಣೆ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದಾಗಿ ನೇಪಾಳದಲ್ಲಿ ನಡೆಯುವ ಪ್ರಮುಖ ವ್ಯಾಪಾರ ಚಟುವಟಿಕೆಗಳಿಗೆ ತೊಂದರೆಯಾಗಿತ್ತು.
ಹೀಗಾಗಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾದಾಗ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ನಂತರ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಪೊಲೀಸರ ಗುಂಡಿಗೆ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಭಾರತೀಯನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.