

ನವದೆಹಲಿ:ಹಣದುಬ್ಬರವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಜೊತೆಗೆ ವಿತ್ತೀಯ ಚೌಕಟ್ಟು ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅವರು ಇಂದು ದೆಹಲಿಯಲ್ಲಿ ಆರ್ಥಿಕ ಸಮ್ಮೇಳನದಲ್ಲಿ ಮಾತನಾಡಿ, ದೇಶದ ಆರ್ಥಿಕ ಬಲವರ್ಧನೆಗೆ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಆರ್ ಬಿಐ ಜೊತೆ ಆರ್ಥಿಕ ಚೌಕಟ್ಟು ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.
ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದ ನಂತರ, ಬ್ಯಾಂಕಿಂಗ್ ವಲಯದಲಡಿ ದೇಶದ ಸುಮಾರು 19 ಕೋಟಿ ಜನರನ್ನು ತರಲಾಗಿದೆ. ಇಂದು ಜನ-ಧನ ಯೋಜನೆಯಡಿ ಸುಮಾರು 26 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ.ಜನ-ಧನ, ಆಧಾರ್, ಮೊಬೈಲ್ ಸೇವೆ ಇವುಗಳೆಲ್ಲ ಸಾಧನೆಯನ್ನು ಹೆಚ್ಚಿಸಲು ಇರುವ ಮಾರ್ಗಗಳು. ಇತ್ತೀಚಿನ ದಿನಗಳಲ್ಲಿ ಭಾರತದ ಒಟ್ಟು ಅಭಿವೃದ್ಧಿ ಪ್ರಗತಿ ಹೆಚ್ಚಾಗಿದ್ದು, ಹಣದುಬ್ಬರ ಕಡಿಮೆಯಾಗಿದೆ. ಭಾರತ ದೇಶ ಉದ್ಯೋಗ ಸೃಷ್ಟಿ ದೇಶವಾಗಿ ಗುರುತಿಸಿಕೊಳ್ಳಬೇಕೆ ಹೊರತು ಉದ್ಯೋಗ ಬಯಸುವ ದೇಶವಾಗಬಾರದು ಎಂದು ಪ್ರಧಾನಿ ಹೇಳಿದರು.
ಏನಿದು ವಿತ್ತೀಯ ಚೌಕಟ್ಟು ಒಪ್ಪಂದ?: ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರುವರಿ 20, 2015ರಲ್ಲಿ Monetary Policy Framework Agreement ಅಥವಾ ವಿತ್ತೀಯ ಚೌಕಟ್ಟು ಒಪ್ಪಂದ. ದೇಶದ ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಳ್ಳುವಾಗ ಬೆಲೆಗಳ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಜೊತೆ ಮಾಡಿಕೊಂಡ ವಿತ್ತೀಯ ನೀತಿ ಇದು.ಈ ಒಪ್ಪಂದದ ಪ್ರಕಾರ, ಆರ್ ಬಿಐ ಕೇಂದ್ರ ಸರ್ಕಾರದ ಯೋಜನೆಗಳಿಗೆ ಬ್ಯಾಂಕುಗಳಲ್ಲಿ ಬಡ್ಡಿಯನ್ನು ನಿಗದಿಪಡಿಸುತ್ತದೆ. ದೇಶದ ಹಣದುಬ್ಬರವನ್ನು ತಡೆದು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುತ್ತದೆ. 2016 ಜನವರಿ ಹೊತ್ತಿಗೆ ಹಣದುಬ್ಬರ ದರವನ್ನು ಶೇಕಡಾ 6ಕ್ಕೆ ತರುವುದು, ಅದರ ಮುಂದಿನ ವರ್ಷಕ್ಕೆ ಹಣದುಬ್ಬರದ ಶೇಕಡಾವಾರು ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.