ರಷ್ಯಾ ಮಹಿಳೆ ಮೇಲೆ ಆ್ಯಸಿಡ್ ದಾಳಿ: ವರದಿ ಕೇಳಿದ ಕೇಂದ್ರ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಶುಕ್ರವಾರ ಆಸಿಡ್ ದಾಳಿ ನಡೆದ ಪ್ರಕರಣಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಶುಕ್ರವಾರ ಆಸಿಡ್ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾತನಾಡಿ, ರಷ್ಯಾ ಮಹಿಳೆಯ ಮೇಲೆ ನಡೆದಿರುವ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸರ್ಕಾರದಿಂದ ವರದಿ ಕೇಳಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆ್ಯಸಿಡ್ ದಾಳಿಗೆ ಒಳಗಾದ ರಷ್ಯಾ ಮಹಿಳೆಗೆ ಸುಂದರ್ ಲಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
ಪೊಲೀಸ್ ಮೂಲಗಳ ಪ್ರಕಾರ ರಷ್ಯಾ ಮಹಿಳೆ ಮೇಲೆ ಆಕೆ ತಂಗಿದ್ದ ನಿವಾಸದ ಮಾಲೀಕನ ಮೊಮ್ಮಗನೇ ಆಸಿಡ್ ದಾಳಿ ನಡೆಸಿದ್ದನು. ಮಹಿಳೆ ತನ್ನ ತವರಾದ  ರಷ್ಯಾಗೆ ವಾಪಸ್ ತೆರಳುವುದನ್ನು ವಿರೋಧಿಸಿದ್ದ ಪಿಜಿ ಮಾಲೀಕ ಶ್ರೀವಾತ್ಸವ್ ಅವರ ಮೊಮ್ಮಗ ಸಿದ್ಧಾರ್ಥ್ ಎಂಬಾತ ಆಕೆಯ ಮೇಲೆ ಆಸಿಡ್ ಎರಚಿದ್ದನು.
ಘಟನೆ ವಿವರ
ಮೂಲತಃ ರಷ್ಯಾದ ಮಾಸ್ಕೋ ನಿವಾಸಿಯಾದ ಮಹಿಳೆ ಭಾರತ ಪ್ರವಾಸಕ್ಕೆ ಆಗಮಿಸಿದ್ದರು. ಕಳೆದ ಮೂರು ದಿನಗಳ ಹಿಂದಷ್ಟೇ ಆಕೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ್ದರು. ಅಲ್ಲಿ  ಸ್ಥಳೀಯ ನಿವಾಸಿ ಶ್ರೀವಾತ್ಸವ್ ಎಂಬುವವರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದರು. ಶ್ರೀವಾತ್ಸವ್ ಅವರ ಮೊಮ್ಮಗ ಸಿದ್ಧಾರ್ಥ್ ವಿದೇಶಿ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದು, ಇತ್ತೀಚೆಗಷ್ಟೇ ಇಬ್ಬರೂ ಲಡಾಖ್ ಗೆ ಹೋಗಿ ವಾಪಸಾಗಿದ್ದರು. ಹೀಗಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಮಹಿಳೆಯ ವೀಸಾ ಅವಧಿ ಮುಗಿದ ಹಿನ್ನಲೆಯಲ್ಲಿ ಆಕೆ ತನ್ನ ತವರಿಗೆ ವಾಪಸಾಗಲು ಸಿದ್ಧತೆ ನಡೆಸಿದ್ದಳು.
ಮಹಿಳೆ ರಷ್ಯಾಗೆ ವಾಪಸ್ ಆಗುವುದನ್ನು ವಿರೋಧಿಸಿದ್ದ ಸಿದ್ಧಾರ್ಥ್ ಆಕೆಯ ಮನವೊಲಿಸಲು ಯತ್ನಿಸಿದ್ದ. ಆದರೆ ಮಹಿಳೆ ಇದಕ್ಕೆ ಒಪ್ಪದೇ ಇದ್ದಾಗ ಸಿದ್ಧಾರ್ಥ್ ತನ್ನ ಸ್ನೇಹಿತರ ನೆರವಿನಿಂದ ಆಸಿಡ್ ತರಿಸಿಕೊಂಡು ಮತ್ತೊಮ್ಮೆ ಆಕೆಯನ್ನು ಮನವೊಲಿಸುವ ಯತ್ನ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕ್ರೋಧಗೊಂಡ ಸಿದ್ಧಾರ್ಥ್ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಆಸಿಡ್ ದಾಳಿಯಿಂದಾಗಿ ವಿದೇಶಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com