

ಪಾಟ್ನಾ: ಬಿಹಾರದ ಗೋಪಾಲ್ ಗಂಜ್ ನಲ್ಲಿ ರಾತ್ರೋರಾತ್ರಿ ಸುಮಾರು 11 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದು, ಸರ್ಕಾರ ಈ ಪ್ರಕರಣವನ್ನು ತನಿಖೆಗೆ ವಹಿಸಿದೆ.
ತೀವ್ರವಾಗಿ ಅಸ್ವಸ್ಥಗೊಂಡಿರುವ ಇನ್ನು ಐದು ಮಂದಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ನೋನಿಯಾ ಟೋಲಾ ಗ್ರಾಮದವರಾಗಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದವರಾಗಿದ್ದಾರೆ.
ಮಂಗಳವಾರ ಸಂಜೆ ದೇಸಿ ಮದ್ಯ ಸೇವಿಸಿದ ಮೇಲೆ ಎಲ್ಲರೂ ವಾಂತಿ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ ಉಂಟಾದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಯಾವ ಕಾರಣದಿಂದ ಸತ್ತಿದ್ದಾರೆ ಎಂದು ಈಗಲೇ ಏನು ಹೇಳಲಾಗುವುದಿಲ್ಲ ಎಂದು ಹೇಳಿರುವ ಗೋಪಾಲ್ ಗಂಜ್ ಜಿಲ್ಲಾಧಿಕಾರಿ ಮೂರು ಸದಸ್ಯರ ತಂಡ ನೇಮಿಸಿ ತನಿಖೆಗೆ ಆದೇಶಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗೋಪಾಲ್ಗಂಜ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.