

ನಮಕ್ಕಲ್: ಜಾತಿ, ಧರ್ಮ ಹೆಸರಿನಲ್ಲಿ ಭೇಟ ಸೃಷ್ಟಿಸಿಕೊಂಡು ಕಚ್ಚಾಡುತ್ತಿರುವವರ ಮಧ್ಯೆ ಇಲ್ಲೊಂದು ಕುಟುಂಬ ವಿಭಿನ್ನ ಸಂಪ್ರದಾಯವೊಂದನ್ನು ರೂಢಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತಮಿಳುನಾಡು ವಿದ್ಯುತ್ ಮಂಡಳಿಯ ಮಾಜಿ ಇಂಜಿನಿಯರ್ ಆಗಿರುವ ಜಿ ಕುಮಾರ್ ಅವರ ಕುಟುಂಬ ಕಳೆದ 30 ವರ್ಷಗಳಿಂದಲೂ ಈದ್ ಉಲ್ ಫಿತರ್ ಸಂದರ್ಭದಲ್ಲಿ ಮುಸ್ಲಿಮರಿಗೆ ಹಾಲು ನೀಡುತ್ತಾ ಬಂದಿದೆ.
ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ದಿನದಂದು ನಮಕ್ಕಲ್-ಸೇಲಂ ರಸ್ತೆಯಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದ ಮುಸ್ಲಿಮರಿಗೆ ಹಿಂದೂ ಕುಟುಂಬವೊಂದು ಹಾಲನ್ನು ನೀಡುತ್ತಿದ್ದದ್ದು, ಗುರುವಾರ ಎಲ್ಲರ ಗಮನ ಸೆಳೆದಿತ್ತು.
30 ವರ್ಷಗಳ ಹಿಂದೆ ನನ್ನ ತಂದೆಯಾಗಿದ್ದ ಗೋವಿಂದ ಅಸಾರಿಯವರು ಹಬ್ಬದ ದಿನದಂದು ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದ ಮುಸ್ಲಿಮರಿಗೆ ನೀರು ಕೊಟ್ಟು ಶುಭ ಹಾರೈಸುತ್ತಿದ್ದರು. ತಂದೆ ಸತ್ತ ನಂತರ ಈ ಸಂಪ್ರದಾಯವನ್ನು ನಾವು ಮುಂದುವರೆಸುತ್ತಿದ್ದೇವೆ ಎಂದು ಕುಮಾರ್ ಅವರು ಹೇಳಿಕೊಂಡಿದ್ದಾರೆ.
ಮುಸ್ಲಿಮರು ಹಾಗೂ ನಮ್ಮ ಕುಟುಂಬದ ಮಧ್ಯೆ ಗಟ್ಟಿಯಾದ ಒಂದು ಬಂಧವಿದೆ. ಹೀಗಾಗಿ ರಂಜಾನ್ ಹಬ್ಬದ ದಿನದಂದು ಸುಮಾರು 40 ಲೀಟರ್ ನಷ್ಟು ಹಾಲಿಗೆ ಬಾದಾಮಿ ಸೇರಿಸಿ ಪ್ರಾರ್ಥನೆ ಸಲ್ಲಿಸಿ ಬರುವ ಮುಸ್ಲಿಂ ಬಾಂಧವರಿಗೆ ನೀಡುತ್ತೇವೆ ಅವರು ತಿಳಿಸಿದ್ದಾರೆ.