

ಶ್ರೀನಗರ: ಕಣಿವೆಗಳ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಈಗಾಗಲೇ ಪ್ರತ್ಯೇಕ ವಸತಿ ಕುರಿತಂತೆ ಹಲವು ವಿವಾದಗಳು ಎದ್ದಿರುವ ಮಧ್ಯೆಯೇ ಭಾನುವಾರ ಆಚರಿಸಲಾದ ಖೀರ್ ಭವಾನಿ ಹಬ್ಬ ಮುಸ್ಲಿಂ ಹಾಗೂ ಪಂಡಿತರ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿತ್ತು.
ವಾರ್ಷಿಕ ಹಬ್ಬ ಖೀರ್ ಭವಾನಿ ಉತ್ರವದಲ್ಲಿ ಪಾಲ್ಗೊಳ್ಳಲು ತುಲ್ಲಾಮುಲ್ಲಾದಲ್ಲಿನ ರಂಗ್ನ್ಯಾ ದೇವಿ ದೇಗುಲಕ್ಕೆ ಬಂದ ಸಾವಿರಾರು ಭಕ್ತರನ್ನು ಸ್ವಾಗತಿಸುವ ಮೂಲಕ ಮುಸ್ಲಿಮರು ಸಾಮರಸ್ಯ ಪ್ರದರ್ಶಿಸಿದರು.
ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 24 ಕಿಮಿ ದೂರದಲ್ಲಿರುವ ಖೀರ್ ಭವಾನಿ ದೇವಾಲಯದಲ್ಲಿ ಕಾಶ್ಮೀರಿ ಪಂಡಿತರು ಪ್ರತಿ ವರ್ಷವೂ ಪೂಜೆ ಸಲ್ಲಿಸುವ ಪದ್ಧತಿ ಹೊಂದಿದ್ದಾರೆ. ಧಾರ್ಮಿಕ ಸೌಹಾರ್ದದ ಸಂಕೇತವಾಗಿರುವ ಈ ಉತ್ಸವದಲ್ಲಿ ಪಂಡಿತರು ಮತ್ತು ಮುಸ್ಲಿಮರು ಕೂಡಿ ಪ್ರಾರ್ಥನೆ ಸಲ್ಲಿಸುತ್ತಾರೆ.
1990ರಲ್ಲಿ ನಡೆದ ಘರ್ಷಣೆ ವೇಳೆ ಕಾಶ್ಮರೀ ತೊರೆದಿದ್ದ ಪಂಡಿತರು ಉತ್ಸವ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
ದೇವರಲ್ಲಿ ಸಂತೋಷ, ಆರೋಗ್ಯ ಹಾಗೂ ಏಳಿಗೆ ನೀಡುವಂತೆ ಪ್ರಾರ್ಥನೆ ಮಾಡಲಾಗುತ್ತದೆ. ವಿವಿಧ ದೇಶಗಳಲ್ಲಿರುವ ಬಹು ದೂರದಲ್ಲಿರುವ ಭಕ್ತಾದಿಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಉತ್ಸವ ಸಂದರ್ಭದಲ್ಲಿ ಸಾಕಷ್ಟು ಜನಜಂಗುಳಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭದ್ರತೆ ಹಾಗೂ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಈ ದಿನ ವರ್ಷಕ್ಕೆ ಒಂದು ಬಾರಿ ಬರುತ್ತದೆ ಎಂದು ಮುಂಬೈನಿಂದ ಬಂದಿರುವ ಭಕ್ತಾದಿ ಪಿ.ಎನ್. ಸಂಗ್ಲಿ ಅವರು ಹೇಳಿದ್ದಾರೆ.