

ನವದೆಹಲಿ: 500 ಮತ್ತು 1000 ರು. ನೋಟುಗಳನ್ನು ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಆರ್ ಬಿಐಗೆ ಅಪಾರ ಪ್ರಮಾಣದ ಲಾಭವಾಗಲಿದ್ದು, ಈ ಸಂಪೂರ್ಣ ಪ್ರಮಾಣದ ಲಾಭಾಂಶವನ್ನು ಭಾರತೀಯ ಸೇನೆಯ ಆಧುನೀಕರಣ ಹಾಗೂ ದೇಶದ ಮೂಲಸೌಕರ್ಯ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ನೋಟು ನಿಷೇಧದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸುಮಾರು 2.5ರಿಂದ 3 ಲಕ್ಷ ಕೋಟಿ ಲಾಭಾಂಶವಾಗಲಿದ್ದು, ಈ ಅಪಾರ ಪ್ರಮಾಣದ ಹಣವನ್ನು ದೇಶದ ಅಭಿವೃದ್ಧಿಗೆ ಬಳಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಉನ್ನತ ಮೂಲಗಳು ತಿಳಿಸಿರುವಂತೆ ನೋಟು ನಿಷೇಧ ಬಳಿಕ ಆರ್ ಬಿಐಗೆ ಬರಬಹುದಾದ ಲಾಭಾಂಶವನ್ನು ಭಾರತೀಯ ಸೇನೆಯ ಆಧುನೀಕರಣಕ್ಕೆ ಬಳಕೆ ಮಾಡಲಾಗುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ ಖರೀದಿ ಮತ್ತು ತಯಾರಿಕೆ, ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿ, ನೌಕಾಪಡೆಯ ಆಧುನಿಕತೆಗಾಗಿ ಬಳಕೆ ಮಾಡಲಾಗುತ್ತದೆ. ಇದಲ್ಲದೆ ದೇಶದ ಮೂಲಸೌಕರ್ಯ ಅಭಿವೃದ್ಧಿಗೂ ಲಾಭಾಂಶದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಮೀಸಲಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ನೋಟು ನಿಷೇಧದ ಕ್ರಮದಿಂದಾಗಿ ದೇಶದಲ್ಲಿರುವ ಶೇ.100ರಷ್ಟು ಪ್ರಮಾಣದ ನಗದಿನ ಪೈಕಿ ಶೇ.80ರಷ್ಟು ನಗದು ಹಣ ಮಾತ್ರ ಬ್ಯಾಂಕುಗಳಿಗೆ ಠೇವಣಿಯಾಗಲಿದ್ದು, ಉಳಿದ ಶೇ.20 ರಷ್ಟು ಹಣ ಕಪ್ಪುಹಣ ಮತ್ತು ನಕಲಿ ನೋಟುಗಳಾಗಿವೆ. ಹೀಗಾಗಿ ಈ ಹಣ ಬ್ಯಾಂಕುಗಳಲ್ಲಿ ಠೇವಣಿಯಾಗದೇ ಚಲಾವಣೆ ಸ್ಥಗಿತಗೊಳ್ಳಲಿದೆ. ಇದರಿಂದ ಭಾರತೀಯ ರಿಸರ್ವ್ ಬ್ಯಾಂಕಿಗೆ ಅಪಾರ ಪ್ರಮಾಣದ ಲಾಭಾಂಶವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1978ರಲ್ಲಿಯೂ ಅಂದಿನ ಸರ್ಕಾರ ನೋಟು ನಿಷೇಧ ಮಾಡಿದ್ದ ವೇಳೆ ಶೇ.20ರಷ್ಟು ನಗದು ಬ್ಯಾಂಕಿಗೆ ಠೇವಣಿಯಾಗಿರಲಿಲ್ಲ. ಆಗಲೂ ಭಾರತೀಯ ರಿಸರ್ವ್ ಬ್ಯಾಂಕಿಗೆ ಸಾಕಷ್ಟು ಲಾಭಾಂಶವಾಗಿತ್ತು. ಈ ಲಾಭಾಂಶವನ್ನು ಆರ್ ಬಿಐ ಕೇಂದ್ರ ಸರ್ಕಾರಕ್ಕೆ ವಿಶೇಷ ಲಾಭಾಂಶವಾಗಿ ರವಾನೆ ಮಾಡಿತ್ತು.