

ನವದೆಹಲಿ: ವಿಶ್ವಖ್ಯಾತಿಯ ಟಿಬೆಟಿಯನ್ ಬೌದ್ಧ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ದಲೈಲಾಮಾ ಅವರು 2017ಕ್ಕೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಈ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಬಗ್ಗೆ ಖಚಿತ ಪಡಿಸಿದ್ದು, 2017ರ ವರ್ಷದಲ್ಲಿ ಅರುಣಾಚಲ ಪ್ರದೇಶಕ್ಕೆ ದಲೈಲಾಮಾ ಅವರು ಭೇಟಿ ನೀಡಲಿದ್ದಾರೆಂದು ಹೇಳಿದೆ.
ತವಾಂಗ್, ಇಟಾನಗರ ಮತ್ತು ಇನ್ನಿತರೆ ಅರುಣಾಚಲ ಪ್ರದೇಶದ ಪೂರ್ವಭಾಗಗಳಿಗೆ ದಲೈಲಾಮಾ ಅವರು ಭೇಟಿ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿನ ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ರಿಚರ್ಡ್ ವರ್ಮಾ ಅವರ ಈ ಭೇಟಿಗೆ ಚೀನಾ ಸಾಕಷ್ಟು ವಿರೋಧ ವ್ಯಕ್ತಪಡಿಸಿತ್ತು.
ಭಾರತ-ಚೀನಾ ಗಡಿಯ ವಿವಾದದಲ್ಲಿ ಅಮೆರಿಕ ರಾಷ್ಟ್ರ ಮಧ್ಯಪ್ರವೇಶ ಮಾಡಿದರೆ ಬಿಕ್ಕಟ್ಟು ಮತ್ತಷ್ಟು ಉಲ್ಭಣಗೊಳ್ಳುತ್ತದೆ. ಅಲ್ಲದೆ, ಸಾಕಷ್ಟು ಶ್ರಮದೊಂದಿಗೆ ಗಡಿಯಲ್ಲಿ ಶಾಂತಿಯನ್ನು ಸೃಷ್ಟಿಸಲಾಗಿದೆ. ಅಮೆರಿಕ ಮಧ್ಯೆ ಪ್ರವೇಶಿಸಿದ್ದೇ ಆದರೆ, ಗಡಿಯಲ್ಲಿರುವ ಶಾಂತಿಗೆ ಭಂಗವಾಗುತ್ತದೆ. ಹೀಗಾಗಿ ಗಡಿ ವಿವಾದ ವಿಚಾರದಲ್ಲಿ ಅಮೆರಿಕ ಮೂಗು ತೂರಿಸಬಾರದು ಎಂದು ಎಚ್ಚರಿಕೆ ನೀಡಿದ್ದರು.