ಡೋಕ್ಲಾಮ್ ಗಡಿಯಲ್ಲಿ ಸೇನಾ ಬಲವನ್ನು ಕಡಿಮೆ ಮಾಡಿಲ್ಲ: ಚೀನಾ ಹೇಳಿಕೆಗೆ ಭಾರತದ ಉತ್ತರ

ಡೋಕ್ಲಾಮ್ ನಿಂದ ಸೇನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಗಡಿಯಲ್ಲಿ ಸೇನಾ ಬಲವನ್ನು ಕಡಿತಗೊಳಿಸಿಲ್ಲ ಎಂದು ಭಾರತ ಗುರುವಾರ ಸ್ಪಷ್ಟನೆ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಡೋಕ್ಲಾಮ್ ನಿಂದ ಸೇನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಗಡಿಯಲ್ಲಿ ಸೇನಾ ಬಲವನ್ನು ಕಡಿತಗೊಳಿಸಿಲ್ಲ ಎಂದು ಭಾರತ ಗುರುವಾರ ಸ್ಪಷ್ಟನೆ ನೀಡಿದೆ. 
ಕಳೆದ 2 ತಿಂಗಳಿನಿಂದ ಉಂಟಾದ ತ್ವೇಷಯಮ ವಾತಾವರಣದ ನಡುವೆಯೇ ಡೋಕ್ಲಾಮ್ ಗಡಿ ಭಾಗದಲ್ಲಿ ಬೀಡು ಬಿಟ್ಟಿದ್ದ 400 ಭಾರತೀಯ ಸೈನಿಕರ ಸಂಖ್ಯೆ ಇದೀಗ 40ಕ್ಕೆ ಇಳಿದಿದೆ ಎಂದು ನಿನ್ನೆಯಷ್ಟೇ ಚೀನಾ ಹೇಳಿತ್ತು. 
ಜೂ.16ರಿಂದ ಸೃಷ್ಟಿಯಾಗಿರುವ ಡೋಕ್ಲಾಮ್ ಬಿಕ್ಕಟ್ಟು ಕುರಿತು ನಕಾಶೆ ಸೇರಿದಂತೆ ಚೀನಾದ ವಿದೇಶಾಂಗ ಸಚಿವಾಲಯ 15 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಈ ಮಾಹಿತಿ ಇತ್ತು. 
ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರರೊಬ್ಬರು, ಚೀನಾ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಬೇಕಾದರೆ ಗಡಿಯಲ್ಲಿ ಶಾಂತಿ ನೆಲಸಬೇಕು ಎನ್ನುವುದು ಭಾರತದ ನಿಲುವಾಗಿದೆ. ಆದರೆ, ಗಡಿಯಿಂದ ಸೇನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಡೋಕ್ಲಾಮ್ ಕಡಿಯಲ್ಲಿ ಸೇನಾ ಬಲವನ್ನು ಕಡಿತಗೊಳಿಸಿದ್ದೇವೆಂಬ ಚೀನಾದ ಹೇಳಿಕೆ ತಪ್ಪಾಗಿದ್ದು, ಜನರನ್ನು ತಪ್ಪು ಹಾದಿಗೆಳೆಯುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ. 
ಬೇಷರತ್ತಾಗಿ ಸೇನೆಯನ್ನು ವಾಪಸ್ ಕರೆಸಿಕೊಳ್ಳಿ: ಭಾರತಕ್ಕೆ ಮತ್ತೆ ಚೀನಾ ತಾಕೀತು
ಸಿಕ್ಕಿಂ ಸಮೀಪದ ಡೋಕ್ಲಾಮ್ ಕುರಿತ ಗಡಿ ವಿವಾದ ಚೀನಾ ಹಾಗೂ ಭೂತಾನ್ ಗೆ ಸಂಬಂಧಿಸಿದ ವಿಷಯವಾಗಿದ್ದು, ಇದಕ್ಕೂ ಭಾರತಕ್ಕೂ ಯಾವುದೇ ಸಂಬಂವಿಲ್ಲ. ಅದೊಂದು ತೃತೀಯ ದೇಶ ಎಂದು ಭಾರತದ ವಿರುದ್ಧ ಚೀನಾ ಹರಿಹಾಯ್ದಿದ್ದು, ಕೂಡಲೇ ಬೇಷರತ್ತಾಗಿ ತಮ್ಮ ಯೋಧರನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ತಾಕೀತು ಮಾಡಿದೆ. 
ವಿವಾದ ಸಂಬಂಧ ಇದೇ ಮೊದಲ ಬಾರಿಗೆ 15 ಪುಟಗಳ ಹೇಳಿಕೆಯೊಂದನ್ನು ಭಾರತದಲ್ಲಿನ ಚೀನಾ ರಾಯಭಾರಿ ಮೂಲಕ ಬಿಡುಗಡೆ ಮಾಡಿಸಿರುವ ಕಮ್ಯುನಿಸ್ಟ್ ದೇಶದ ವಿದೇಶಾಂಗ ಇಲಾಖೆ, ಭಾರತದ ವಿರುದ್ಧ ಸಾಕಷ್ಟು ಆರೋಪಗಳು ಹಾಗೂ ಟೀಕೆಗಳನ್ನು ಮಾಡಿದೆ. 
ಡೋಕ್ಲಾಮ್ ನಲ್ಲಿ ರಸ್ತೆ ನಿರ್ಮಾಣ ಮಾಡುವ ವಿಷಯವನ್ನು ಭಾರತಕ್ಕೆ ಈ ಹಿಂದೆಯೇ ತಿಳಿಸಿದ್ದೆವು. 2006ರಲ್ಲಿ ಗಡಿ ವಿವಾದ ಸಂಬಂಧ ನಡೆದ ಮಾತುಕತೆ ವೇಳೆ ಸಿಕ್ಕಿಂ ವಲಯದ ಗಡಿಗೆ ಉಭಯ ದೇಶಗಳ ಸಹಮತವಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. ಆದರೆ, ಭಾರತವು ಭೂತಾನ್ ಅನ್ನು ಪಿಳ್ಳೆನೆವ ಮಾಡಿಕೊಳ್ಳುತ್ತಿದೆ. 
ಚೀನಾ ಹಾಗೂ ಭೂತಾನ್ ನಡುವಣ ಗಡಿ ಮಾತುಕತೆಗೆ ಅಡ್ಡಿಪಡಿಸುವ ಅಥವಾ ತಡೆಯೊಡ್ಡುವ ಯಾವುದೇ ಹಕ್ಕೂ ಭಾರತಕ್ಕೆ ಇಲ್ಲ. ಡೋಕ್ಲಾಮ್ ಚೀನಾಕ್ಕೆ ಸೇರಿದ್ದು, ಅದರೊಳಗೆ ಕಾಲಿಡುವ ಮೂಲಕ ಚೀನಾ ಮಾತ್ರವಲ್ಲದೇ ಭಾತಾನ್ ನ ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯವನ್ನೂ ಭಾರತ ಉಲ್ಲಂಘಿಸಿದೆ ಎಂದು ಕಿಡಿಕಾರಿದೆ. 
ಜೂನ್.18 ರಂದು 270 ಭಾರತೀಯ ಯೋಧರು ಚೀನಾ ಗಡಿಯೊಳಗೆ 100 ಮೀಟರ್ ನಷ್ಟು ಬಂದು, ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡು ಉದ್ವಿಗ್ನ ವಾತಾವರಣ ನಿರ್ಮಾಣವಾಗುವಂತೆ ಮಾಡಿದ್ದಾರೆ. ಒಂದು ಹಂತದಲ್ಲಿ ಭಾರತೀಯ ಯೋಧರ ಸಂಖ್ಯೆ 400ರವರೆಗೂ ಏರಿಕೆಯಾಗಿತ್ತು. 3 ಟೆಂಟ್ ಗಳನ್ನು ಹಾಕಿಕೊಂಡಿದ್ದರು. ಚೀನಾ ಗಡಿಯೊಳಕ್ಕೆ 180 ಮೀಟರ್ ವರೆಗೂ ಬಂದಿದ್ದರು. ಜುಲೈ ಅಂತ್ಯದಲ್ಲಿ ಡೋಕ್ಲಾಮ್ ನಲ್ಲಿ 40 ಭಾರತೀಯ ಯೋಧರು ಇದ್ದು, ಒಂದು ಬುಲ್ಡೋಜರ್'ನ್ನು ಅಕ್ರಮವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದೆ. 
ಅಲ್ಲದೆ, ಗಡಿ ಸಾರ್ವಭೌಮತೆಯನ್ನೂ ರಕ್ಷಿಸಿಕೊಳ್ಳುವ ಚೀನಾ ಸರ್ಕಾರ ಹಾಗೂ ಜನರ ನಿಶ್ಚಯವನ್ನು ಯಾವುದೇ ದೇಶ ಲಘುವಾಗಿ ಪರಿಗಣಿಸಬಾರದು. ಚೀನಾ ತನ್ನ ರಕ್ಷಣೆಗೆ ಅಗತ್ಯವಿರುವ ಅಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಿದೆ. ಹೀಗಾಗಿ ಭಾರತ ಕೂಡಲೇ ಬೇಷರತ್ತಾಗಿ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ತಾಕೀತು ಮಾಡಿದೆ. 
ಇದರ ಜೊತೆಗೆ ಜು.28 ರಂದು ಚೀನಾ ಪ್ರವಾಸಕ್ಕೆ ತೆರಳಿದ್ದ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆಗಿನ ಮಾತುಕತೆಯ ವಿವರವನ್ನೂ ಚೀನಾ ಬಹಿರಂಗಪಡಿಸಿದೆ. ಭಾರತ ತನ್ನ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ದೋವಲ್ ಗೆ ಹೇಳಿದ್ದಾಗಿ ಹೇಳಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com