ಸಂಗ್ರೂರ್: ಪಂಜಾಬ್ ನಲ್ಲಿ ಶಾಂತಿ ಕದಡುವವರಿಗೆ ಆಪ್ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಟಿಂಡಾ ಜಿಲ್ಲೆಯ ಮೌರ್ ಮಂಡಿಯಲ್ಲಿ ಬಳಿ ಕಾರ್ ಬಾಂಬ್ ಸ್ಫೋಟಗೊಂಡಿತ್ತು. ಈ ದಾಳಿ ಕುರಿತಂತೆ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಕೇಜ್ರಿವಾಲ್ ಪಂಜಾಬ್ ನಲ್ಲಿ ಶಾಂತಿ ಕದಡುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಫೆಬ್ರವರಿ 4 ರಂದು ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು ಚುನಾವಣಾ ಪ್ರಚಾರಕ್ಕೆ ಇಂದು ತೆರೆಬೀಳಲಿದೆ. ಈ ಹಿನ್ನೆಲೆಯಲ್ಲಿ ಬಲಿಯಾನ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ ಮೌರ್ ಮಂಡಿ ಕಾರ್ ಬಾಂಬ್ ಸ್ಫೋಟದ ವಿರುದ್ಧ ಕಿಡಿಕಾರಿದ್ದಾರೆ.
ವಿವಾದಿತ ಗುರು ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಆಪ್ತ ಸಂಬಂಧಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಹರ್ಮಿಂದರ್ ಜಸ್ಸಿ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸ್ಥಳದ ಪಕ್ಕದಲ್ಲೇ ಬಾಂಬ್ ಸ್ಫೋಟಗೊಂಡಿತ್ತು. ಈ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದರು.