

ನವದೆಹಲಿ: ಬಿಜೆಪಿ ವಿವಾದಿತ ಸಂಸದ ಎಂದೇ ಹೆಸರು ಪಡೆದಿರುವ ಸಾಕ್ಷಿ ಮಹಾರಾಜ್ ಅವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಹಲವು ಟೀಕೆಗಳಿಗೆ ಗುರಿಯಾಗಿದ್ದಾರೆ.
ದೇಶದಲ್ಲಿ ಜನಸಂಖ್ಯೆ ಏರಿಕೆಯಾಗಲು ನಾಲ್ವರು ಹೆಂಡತಿ, 40 ಮಕ್ಕಳನ್ನು ಹೊಂದಬೇಕೆಂಬ ಪರಿಕಲ್ಪನೆಯನ್ನು ಅನುಸರಿಸುವವರೇ ಕಾರಣ ಎಂದು ಪರೋಕ್ಷವಾಗಿ ಮುಸ್ಲಿಮರ ವಿರುದ್ಧ ದೂರಿದ್ದಾರೆ.
ಉತ್ತರಪ್ರದೇಶ ಮೀರತ್ ನಲ್ಲಿ ನಿನ್ನೆ ದೇವಾಲಯ ಉದ್ಘಾಟಿಸಿದ ಬಳಿಕ ಮಾತನಾಡಿದ್ದ ಅವರು, ದೇಶದಲ್ಲಿ ಜನಸಂಖ್ಯೆ ಏರಿಕೆಯಾಗಲು ನಾಲ್ಕು ಪತ್ನಿಯರು, 40 ಮಕ್ಖಳು ಹೊಂದಬೇಕೆಂಬ ಪರಿಕಲ್ಪನೆಯನ್ನು ಅನುಸರಿಸುತ್ತಿರುವವರೇ ಕಾರಣರಾಗಿದ್ದು, ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕಿದೆ. ಮಹಿಳೆಯರು ಕೇವಲ ಮಕ್ಕಳನ್ನು ಹೆರುವ ಯಂತ್ರಗಳಲ್ಲ. ತಾಯಿಯಂದಿರು ಹಿಂದೂಗಳೇ ಆಗಲಿ ಮುಸ್ಲಿಮರೇ ಅಗಲೀ ಅವರಿಗೆ ಗೌರವ ನೀಡಬೇಕೆಂದು ಹೇಳಿದ್ದರು.
ಸಾಕ್ಷಿ ಮಹಾರಾಜ್ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದವು. ಅಲ್ಲದೆ, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದವು.
ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಾಕ್ಷಿ ಮಹಾರಾಜ್ ಅವರು, ನಾನು ಯಾವುದೇ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡು ಹೇಳಿಕೆಯನ್ನು ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಹೇಳಿಕೆ ಸಂಬಂಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡರೂ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆಂದು ಹೇಳಿದ್ದಾರೆ.
ಸಾಕ್ಷಿ ಮಹಾರಾಜ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ಕೆಸಿ. ಮಿತ್ತಲ್ ಅವರು, ಧಾರ್ಮಿಕ ಹಾಗೂ ಜಾತಿ ಆಧಾರಿತವಾಗಿ ಸಾಕ್ಷಿ ಮಹಾರಾಜ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಸುಪ್ರೀಂ ಆದೇಶಕ್ಕೆ ವಿರುದ್ಧವಾಗಿದೆ. ಹೇಳಿಕೆ ಸಂಬಂಧ ಕಾಂಗ್ರೆಸ್ ಚುನಾವಣಾ ಆಯೋಗದ ಬಳಿ ಹೋಗುತ್ತಿದ್ದು, ಬಿಜೆಪಿ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಿದೆ ಎಂದು ತಿಳಿಸಿದ್ದಾರೆ.
ಇನ್ನು ಸಾಕ್ಷಿ ಮಹಾರಾಜ್ ಅವರ ಹೇಳಿಕೆಯಿಂದ ದೂರ ಸರಿದಿರುವ ಬಿಜೆಪಿ, ಇದು ಪಕ್ಷದ ಹೇಳಿಕೆಯಲ್ಲ. ಸಾಕ್ಷಿ ಮಹಾರಾಜ್ ಅವರು ಯಾವುದೇ ಹೇಳಿಕೆ ನೀಡಿದ್ದರೂ ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಹೇಳಿಕೊಂಡಿದೆ.