ಮಂಡಸೌರ್ ಪ್ರತಿಭಟನೆ: ನೀಮಚ್ ಬಳಿ ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಮಧ್ಯಪ್ರದೇಶದ ಮಂಡಸೌರ್ ರೈತರ ಪ್ರತಿಭಟನೆ ಪ್ರಕರಣ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೃತರ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು...
ಮಂಡಸೌರ್ ಘರ್ಷಣೆ ಪ್ರಕರಣ: ನೀಮಚ್ ಬಳಿ ರಾಹುಲ್'ರನ್ನು ವಶಕ್ಕೆ ಪಡೆದ ಪೊಲೀಸರು
ಮಂಡಸೌರ್: ಮಧ್ಯಪ್ರದೇಶದ ಮಂಡಸೌರ್ ರೈತರ ಪ್ರತಿಭಟನೆ ಪ್ರಕರಣ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೃತರ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ನೀಮಚ್ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಮಂಡಸೌರ್ ನಲ್ಲಿ ರೈತರ ಪ್ರತಿಭಟನೆಯ್ನು ಹತ್ತಿಕ್ಕುವ ಸಲುವಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ವೇಳೆ ಐವರು ರೈತರು ಸಾವನ್ನಪ್ಪಿದ್ದರು.
ನಿನ್ನೆಯಷ್ಟೇ ಘಟನಾ ಸ್ಥಳಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿಯವರನ್ನು ತಡೆಹಿಡಯಲಾಗಿತ್ತು. ಆದರೂ ತಮ್ಮ ಪ್ರಯತ್ನವನ್ನು ಮುಂದುವರೆಸಿರುವ ರಾಹುಲ್ ಗಾಂಧಿಯವರು ಮತ್ತೊಮ್ಮೆ ಮಂಡಸೌರ್ ಗೆ ಭೇಟಿ ನೀಡಲು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಈ ವೇಳೆ ನೀಮಚ್ ಬಳಿ ಮಧ್ಯಪ್ರದೇಶ ಪೊಲೀಸರು ರಾಹುಲ್ ರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಪೊಲೀಸರು ವಶಕ್ಕೆ ಪಡೆದಿರುವ ಹಿನ್ನಲೆಯಲ್ಲಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರ ಸಾಲವನ್ನು ಮನ್ನಾ ಮಾಡುತ್ತಿಲ್ಲ, ಬೋನಸ್ ಅನ್ನೂ ನೀಡುತ್ತಿಲ್ಲ. ರೈತರಿಗೆ ಕೇವಲ ಗುಂಡುಗಳನ್ನು (ಬುಲೆಟ್ಸ್) ಮಾತ್ರ ನೀಡುತ್ತಿದ್ದಾರೆಂದು ಹೇಳಿದ್ದಾರೆ.
ರೈತರನ್ನು ಹತ್ಯೆ ಮಾಡಲಾಗಿದೆ. ನಾನು ಮಂಡಸೌರ್ ಗೆ ಹೋಗಬೇಕು. ಶ್ರೀಮಂತರ ಸಾಲಗಳನ್ನು ಮೋದಿ ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲವನ್ನು ಮಾತ್ರ ಮನ್ನಾ ಮಾಡುತ್ತಿಲ್ಲ. ಯಾವುದೇ ಕಾರಣಗಳನ್ನು ನೀಡದೆಯೇ ನನ್ನನ್ನು ಬಂಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಇದೇ ರೀತಿ ಮಾಡಿದ್ದರು ಎಂದು ತಿಳಿಸಿದ್ದಾರೆ.