ತಮ್ಮ ಹಾಗೂ ತಮ್ಮ ಸಂಸ್ಥೆಯ ವಿರುದ್ಧ 100 ಕೋಟಿ ಆದಾಯ ಗಳಿಸಿದ ವರದಿ ಪ್ರಕಟಿಸಿದ ದಿ ವೈರ್ ಸಂಸ್ಥೆಯ ವಿರುದ್ಧ 100 ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಮಿತ್ ಶಾ ಅವರ ಪುತ್ರ ಜಯ್ ಶಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಯ್ ಶಾ ತಮ್ಮ ವಿರುದ್ಧ ಲೇಖನ ಮಾನಹಾನಿಕರವಾಗಿದ್ದು, ಈ ಬಗ್ಗೆ ವರದಿ ಪ್ರಕಟಿಸಿದ ಸಂಸ್ಥೆ, ಅದರ ಲೇಖಕರ ವಿರುದ್ಧ 100 ಕೋಟಿ ರು.ಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಪ್ರಕರಣ ಸಂಬಂಧ ಯಾವುದೇ ಸುದ್ದಿ ಸಂಸ್ಥೆ ಅಥವಾ ಪತ್ರಿಕೆಗಳು ಚರ್ಚೆ ನಡೆಸಿದರೆ ಅಥವಾ ಈ ಸುದ್ದಿಯನ್ನು ಉಲ್ಲೇಖಿಸಿ ಸುದ್ದಿ ಪ್ರಕಟಿಸಿದರೂ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ದಿ ವೈರ್ ಸುದ್ದಿ ಸಂಬಂಧ ಸುದ್ದಿಸಂಸ್ಥೆ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಸುದ್ದಿ ಅಮಿತ್ ಶಾ ಅವರ ವರ್ಚಸ್ಸಿಗೆ ಧಕ್ಕೆ ತರುವ ಯೋಜನೆ ಎಂದು ಕಿಡಿಕಾರಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, "ದಿ ವೈರ್ ಸುದ್ದಿತಾಣ ಅಮಿತ್ ಶಾ ಮತ್ತು ಅವರ ಪುತ್ರ ಜಯ್ ಶಾ ವಿರುದ್ಧ ಆಧಾರ ರಹಿತ ಆರೋಪ ಮಾಡಿದೆ. ಈ ಹಿನ್ನಲೆಯಲ್ಲಿ ವೆಬ್‌ಸೈಟ್ ನ ಮಾಲೀಕರು, ಸಂಪಾದಕರು ಮತ್ತು ವರದಿ ಬರೆದವರ ವಿರುದ್ಧ ರು.100 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಅಂತೆಯೇ ಈ ವರದಿಗೆ ಆಧಾರವಿಲ್ಲ. ದಿ ವೈರ್ ಸುದ್ದಿತಾಣದ ಮಾಲೀಕರು, ಸಂಪಾದಕರು ಮತ್ತು ವರದಿ ಬರೆದವರ ವಿರುದ್ಧ ಅಹ್ಮದಾಬಾದ್ ನ್ಯಾಯಾಲಯದಲ್ಲಿ ರು. 100 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಜಯ್ ಶಾ ನಿರ್ಧರಿಸಿದ್ದಾರೆ" ಎಂದು ಗೋಯಲ್ ಹೇಳಿದ್ದಾರೆ.