ಇದೀಗ ದಿ ವೈರ್ ಸುದ್ದಿತಾಣದ ವರದಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸುದ್ದಿ ತಾಣ ವರದಿ ಮಾಡಿರುವಂತೆ "ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಾಗೂ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಯ್ ಶಾ ಒಡೆತನದ "ಟೆಂಪಲ್ ಎಂಟರ್ ಪ್ರೈಸಸ್" ಕಂಪೆನಿಯ ಆದಾಯ 16 ಸಾವಿರ ಪಟ್ಟು ಹೆಚ್ಚಾಗಿದೆ ಎಂದು "ದಿ ವೈರ್" ವರದಿ ಮಾಡಿದೆ.
ವರದಿಯಲ್ಲಿರುವಂತೆ "ಟೆಂಪಲ್ ಎಂಟರ್ ಪ್ರೈಸಸ್ ಸಂಸ್ಥೆಯು ರಿಜಿಸ್ಟ್ರಾರ್ ಆಫ್ ಕಂಪೆನೀಸ್ ಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ 2013 ಮತ್ತು 2014ರಲ್ಲಿ ಕ್ರಮವಾಗಿ ರು.6, 230 ಮತ್ತು ರು.1,724 ನಷ್ಟ ಅನುಭವಿಸಿತ್ತು. ಆದರೆ 2014–15ರಲ್ಲಿ ಕಂಪೆನಿ ರು.50 ಸಾವಿರ ಆದಾಯ ಗಳಿಸಿದೆ. ಈ ಪೈಕಿ ಕಂಪೆನಿಯು ರು.18,728 ಲಾಭ ಗಳಿಸಿದೆ. ಆದರೆ 2015 ಮತ್ತು 16ನೇ ಸಾಲಿನಲ್ಲಿ ಕಂಪೆನಿಯ ಆದಾಯ ಏಕಾಏಕಿ ರು. 80.5 ಕೋಟಿಗೆ ಏರಿದೆ ಎಂದು ಹೇಳಲಾಗಿದೆ. ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ಪರಿಮಳ್ ನತವಾನಿ ಅವರ ಸಂಬಂಧಿ ರಾಜೇಶ್ ಖಂಡ್ವಾಲಾ ಒಡೆತನದ ಹಣಕಾಸು ಸಂಸ್ಥೆಯು ಟೆಂಪಲ್ ಎಂಟರ್ ಪ್ರೈಸಸ್‌ಗೆ ರು.15.78 ಕೋಟಿ ಸಾಲ ನೀಡಿದ ಬಳಿಕ ಟೆಂಪಲ್ ಕಂಪೆನಿಯ ಆದಾಯದಲ್ಲಿ ಈ ಭಾರೀ ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಲಾಗಿದೆ.
ಅಲ್ಲದೆ 2016ರ ಅಕ್ಟೋಬರ್ ನಲ್ಲಿ ತನ್ನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳ್ಳಿಸಿದ್ದ ಜಯ್ ಶಾ ಕಂಪೆನಿ, ರು.1.4 ಕೋಟಿ ನಷ್ಟ ಘೋಷಿಸಿಕೊಂಡಿತ್ತು. 2013–14ರಲ್ಲಿ ಟೆಂಪಲ್ ಎಂಟರ್‌ಪ್ರೈಸಸ್ ಯಾವುದೇ ಸ್ಥಿರಾಸ್ತಿ ಅಥವಾ ಹೂಡಿಕೆ ಹೊಂದಿರಲಿಲ್ಲ. 2014 ಮತ್ತು15ರ ಆರ್ಥಿಕ ವರ್ಷದಲ್ಲಿ ಕಂಪೆನಿಯು ರು. 5,796 ಆದಾಯ ತೆರಿಗೆ ರಿಫಂಡ್ ಪಡೆದಿದೆ. ಆದರೆ ಮುಂದಿನ ವರ್ಷದಲ್ಲೇ ಅಂದರೆ 2015–16ರಲ್ಲಿ ಕಂಪೆನಿಯ ಆದಾಯ ರು.80.5 ಕೋಟಿಗೆ ಏರಿಕೆಯಾಗಿರುವುದು ಅನುಮಾನ ಮೂಡಿಸಿದೆ. ಅಲ್ಲದೆ 2015–16ರಲ್ಲಿ ರು. 2 ಲಕ್ಷ ಸ್ಥಿರಾಸ್ತಿ, ರು. 9 ಕೋಟಿ ಹೂಡಿಕೆ ಹೊಂದಿರುವುದಾಗಿ ಕಂಪೆನಿ ಹೇಳಿಕೊಂಡಿದೆ. ತನ್ನ ಉತ್ಪನ್ನಗಳ ಮಾರಾಟದಿಂದ ಆದಾಯದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿಕೊಂಡಿರುವ ಟೆಂಪಲ್ ಎಂಟರ್ ಪ್ರೈಸಸ್ ಸಂಸ್ಥೆ 2015–16ರಲ್ಲಿ ರು.51 ಕೋಟಿ ವಿದೇಶಿ ಆದಾಯ ತೋರಿಸಿದೆ ಎಂದು ದಿ ವೈರ್ ವರದಿ ಮಾಡಿದೆ.
2004ರಲ್ಲಿ ಆರಂಭವಾದ ಟೆಂಪಲ್ ಎಂಟರ್ ಪ್ರೈಸಸ್ ಗೆ ಜಯ್ ಶಾ ಮತ್ತು ಜಿತೇಂದ್ರ ಶಾ ನಿರ್ದೇಶಕರಾಗಿದ್ದಾರೆ. ಅಮಿತ್ ಶಾ ಅವರ ಪತ್ನಿ ಸೋನಾಲ್ ಶಾ ಅವರು ಕಂಪೆನಿಯ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ವರದಿ ಹೇಳಲಾಗಿದೆ.
ದಿ ವೈರ್ ಸುದ್ದಿಗೆ ಸಂಬಂಧಿಸಿದಂತೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಟೆಂಪಲ್ ಎಂಟರ್‌ಪ್ರೈಸಸ್ ಆದಾಯ ಏಕಾಏಕಿ ಏರಿಕೆಯಾಗಿಲ್ಲ. ಕಂಪೆನಿಯ ವ್ಯವಹಾರ ಪಾರದರ್ಶಕವಾಗಿದೆ ಎಂದು ಹೇಳಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಯ್ ಶಾ ಅವರ ವಕೀಲ ಮಾಣಿಕ್ ದೋಗ್ರಾ, "ನಾವು ನೀಡುವ ಮಾಹಿತಿಯನ್ನು ನೀವು ತಿರುಚಿ ಪ್ರಕಟಿಸಬಾರದು. ಒಂದು ವೇಳೆ ನೀವು ಈ ಮಾಹಿತಿ ತಿರುಚಿ ವರದಿ ಪ್ರಕಟಿಸಿದರೆ ನಿಮ್ಮ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.