ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಪಿನ್ ರಾವತ್ ಅವರು, "ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಪಾಕಿಸ್ತಾನಕ್ಕೆ ಒಂದು ಸಂದೇಶವಷ್ಟೇ..ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದರೆ ಮತ್ತೆ ಅಂತಹ ದಾಳಿಗಳನ್ನು ನಡೆಸಲು ಭಾರತ ಹಿಂದೇಟು ಹಾಕುವುದಿಲ್ಲ. ಅಗತ್ಯ ಬಿದ್ದರೆ ಭಾರತೀಯ ಸೇನೆ ನಿಯಂತ್ರಣ ರೇಖೆಯಾಚೆ ಮತ್ತೆ ಸರ್ಜಿಕಲ್ ದಾಳಿಗಳನ್ನು ನಡೆಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನೆಗೆ ಪ್ರಚೋದನೆ ನೀಡುವ ತನ್ನ ವರ್ತನೆಯನ್ನು ಪಾಕಿಸ್ತಾನ ಬದಲಿಸಿಕೊಳ್ಳಲೇ ಬೇಕು.. ಒಂದು ವೇಳೆ ಪಾಕ್ ತನ್ನ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯಬಹುದು. ಆದರೆ ಮುಂದಿನ ಸಂಭಾವ್ಯ ದಾಳಿ ಹಿಂದಿನ ರೂಪದಲ್ಲಿಯೇ ಇರಬಹುದು ಎಂದು ಹೇಳಲಾಗದು. ಅದಕ್ಕಿಂತಲೂ ಹೆಚ್ಚಿನ ಪರಿಣಾಮ ಅದು ಬೀರಬಹುದು ಎಂದು ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
"ನಿಯಂತ್ರಣ ರೇಖೆಯಾಚೆ ಭಯೋತ್ಪಾದನೆ ಶಿಬಿರಗಳು ಈಗಲೂ ಅಸ್ತಿತ್ವದಲ್ಲಿವೆ. ಆದ್ದರಿಂದ ಭಯೋತ್ಪಾದಕರು ಭಾರತದಲ್ಲಿ ನುಸುಳುವುದನ್ನು ಮುಂದುವರಿಸುತ್ತಾರೆ. ಅದಕ್ಕೂ ನಾವು ಸಿದ್ಧರಿದ್ದೇವೆ. ನಾವು ಅವರನ್ನು ಬರಮಾಡಿಕೊಳ್ಳುತ್ತೇವೆ ಮತ್ತು ಭೂಮಿಯಡಿ ಎರಡೂವರೆ ಅಡಿ ಆಳಕ್ಕೆ ಅವರನ್ನು ಕಳುಹಿಸುತ್ತೇವೆ" ಎಂದು ‘ಇಂಡಿಯಾ ಮೋಸ್ಟ್ ಫಿಯರ್‌ಲೆಸ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾವತ್ ಹೇಳಿದರು.