

ನವದೆಹಲಿ: ಜಗತ್ತಿನ 210ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆರ್ಭಟ ಮೆರೆಯುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟ ಅತೀ ದೊಡ್ಡ ಜನಾಂದೋಲನವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಅಧಿವೇಶನದ ಉನ್ನತ ಮಟ್ಟದ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಭಾಷಣ ಮಾಡಿದರು. ಈ ವೇಳೆ, 'ಜಗತ್ತನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಮಹಾಮಾರಿ ಕೊರೋನಾ ವಿರುದ್ಧ ಭಾರತ ಪರಿಣಾಮಕಾರಿ ಹೋರಾಟ ನಡೆಸಿದೆ. ಈಗಾಗಲೇ ಇದಕ್ಕೆ ತಕ್ಕ ಪ್ರತಿಫಲ ಕೂಡ ಸಿಕ್ಕಿದೆ. ಈಗ ಕೊರೋನಾ ವಿರುದ್ಧ ಹೋರಾಟ ಜನಾಂದೋಲನವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
150ಕ್ಕೂ ಹೆಚ್ಚು ದೇಶಗಳಿಗೆ ಭಾರತ ನೆರವು
ಆರಂಭದಿಂದಲೂ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಭಾರತ ಸಕ್ರಿಯವಾಗಿ ಬೆಂಬಲ ನೀಡುತ್ತಾ ಬಂದಿದೆ. ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ಇಸಿಒಎಸ್‌ಒಸಿ) ಮೊದಲ ಅಧ್ಯಕ್ಷ ಭಾರತೀಯರಾಗಿದ್ದರು. ಇಸಿಒಎಸ್‌ಒಸಿ ಕಾರ್ಯಸೂಚಿ ರೂಪಿಸುವಲ್ಲಿ ಭಾರತವು ಸಹ ಕೊಡುಗೆ ನೀಡಿದೆ.
ಭಾರತದಲ್ಲಿ ಆರ್ಥಿಕತೆ ಮರು ಸ್ಥಾಪಿಸುತ್ತಿದ್ದೇವೆ. 2020ಕ್ಕೆ ಪ್ರತಿಯೊಬ್ಬರಿಗೂ ಸೂರು ನೀಡುತ್ತೇವೆ. ಸ್ವಚ್ಛತೆಗಾಗಿ ನಾವು ಬಹುದೊಡ್ಡ ಅಭಿಯಾನ ಮಾಡಿದ್ದೇವೆ. 30 ಕೋಟಿ 80 ಲಕ್ಷ ಟನ್ ಕಾರ್ಬನ್ ತ್ಯಾಜ್ಯ ಕಡಿಮೆ ಮಾಡಿದ್ದೇವೆ. ನಮ್ಮ ಧ್ಯೇಯ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬುದು. ಇದರರ್ಥ ಎಲ್ಲರ ನಂಬಿಕೆಯೊಂದಿಗೆ ಒಟ್ಟಾಗಿ ಬೆಳವಣಿಗೆ ಸಾಧಿಸುವುದು ಎಂದು ಹೇಳಿದರು.
ನಮ್ಮ ದೇಶಿಯ ಪ್ರಯತ್ನಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿ ಮತ್ತು 2030 ಕಾರ್ಯಸೂಚಿಯನ್ನು ಸಾಧಿಸಲು ನಾವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ. ಸುಸ್ಥಿರ ಅಭಿವೃದ್ಧಿ ಗುರಿ ಮುಟ್ಟಲು ಅಭಿವೃದ್ಧಿ ಹೊಂದುತ್ತಿರುವು ರಾಷ್ಟ್ರಗಳಿಗೂ ಸಹ ಬೆಂಬಲವಾಗಿ ನಿಂತಿದ್ದೇವೆ ಎಂದು ತಿಳಿಸಿದರು.
ಕರೊನಾ ವೈರಸ್ ಸಾಂಕ್ರಾಮಿಕವು ಎಲ್ಲ ರಾಷ್ಟ್ರಗಳ ಸ್ಥಿತಿಸ್ಥಾಪಕತ್ವವನ್ನು ತೀವ್ರವಾಗಿ ಪರೀಕ್ಷಿಸಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರ ಮತ್ತು ನಾಗರಿಕ ಸಮಾಜದ ಪ್ರಯತ್ನಗಳನ್ನು ಒಟ್ಟುಗೂಡಿಸುವ ಮೂಲಕ ಜನರ ಚಳವಳಿಯನ್ನಾಗಿ ಮಾಡಲು ನಾವು ಪ್ರಯತ್ನಿಸಿದ್ದೇವೆ ಎಂದರು.
ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟಾನಿಯೊ ಗುಟಾರೆಸ್ ಮತ್ತು ನಾರ್ವೆ ಪ್ರಧಾನಿ ಅವರೊಂದಿಗೆ ವಿಡಿಯೋ ಭಾಷಣ ಮಾಡಿದರು. ವಿಶ್ವಸಂಸ್ಥೆಯ ಸಾಮಾಜಿಕ ಮತ್ತು ಆರ್ಥಿಕ ಅಧಿವೇಶನದ ಉನ್ನತ ಮಟ್ಟದ ಸಭೆಯಲ್ಲಿ ಸರಕಾರಗಳು, ಸಾಮಾಜಿಕ ತಜ್ಞರು, ಶೈಕ್ಷಣಿಕ ರಂಗದ ಪ್ರತಿನಿಧಿಗಳು ಭಾಗವಹಿಸಿದ್ದರು. ಕೋವಿಡ್-19ರ ಬಹುಪಕ್ಷೀಯತೆ, 75ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಮುದಾಯಕ್ಕೆ ಯಾವ ರೀತಿಯಲ್ಲಿ ವಿಶ್ವಸಂಸ್ಥೆಯ ಅಗತ್ಯವಿದೆ ಎಂಬುದು ಈ ವರ್ಷದ ಅಧಿವೇಶನದ ಘೋಷವಾಕ್ಯವಾಗಿದೆ.
ಬಲಿಷ್ಠ ನಾಯಕತ್ವದ ಮೂಲಕ ಜಾಗತಿಕ ಕಾರ್ಯಸೂಚಿ ರೂಪಿಸುವ ಮಾರ್ಗೋಪಾಯಗಳ ಅನ್ವೇಷಣೆ, ಪರಿಣಾಮಕಾರಿ ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಘಟನೆ, ಜಾಗತಿಕ ಸಾರ್ವಜನಿಕ ಸರಕುಗಳ ಮಹತ್ವ ಮತ್ತು ಪಾಲ್ಗೊಳ್ಳುವಿಕೆಯನ್ನು ವೃದ್ಧಿಸುವ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಲಾಗಿದೆ. ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಪಡೆಯಲು ನಿರಂತರ ಹೋರಾಡುತ್ತಿರುವ ಭಾರತಕ್ಕೆ ಈ ಅಧಿವೇಶನ ಮಹತ್ವಪೂರ್ಣವಾಗಿದೆ. ಈ ವಿಷಯ ಪ್ರಸ್ತಾಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮೊದಲ ಅವಕಾಶ ಸಿಕ್ಕಿದೆ.