

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕು ಪರೀಕ್ಷೆಯಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದ್ದು, 24 ಗಂಟೆಗಳಲ್ಲಿ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಕೊರೋನಾ ಪರೀಕ್ಷೆಗಳನ್ನು ಮಾಡಿದೆ.
ಹೌದು.. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೊಬ್ಬರಿ 11,72,179 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದು ಜಗತ್ತಿನಲ್ಲೇ ಒಂದು ದಿನದ ಗರಿಷ್ಠ ಸಂಖ್ಯೆಯ ಪರೀಕ್ಷಾ ಪ್ರಮಾಣವಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಭಾರತದ ಒಂದು ದಿನದ ಕೊವಿಡ್-19 ಪರೀಕ್ಷೆಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ ಕೋವಿಡ್ 19 ಪರೀಕ್ಷಾ ಪ್ರಮಾಣವಾಗಿದೆ. ಅಂತೆಯೇ ಗರಿಷ್ಠ ಪ್ರಮಾಣದ ಕೋವಿಡ್ ಪರೀಕ್ಷೆಗಳ ಹೊರತಾಗಿಯೂ ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಜನವರಿ 30ರಂದು ಭಾರತದಲ್ಲಿ ದಿನಕ್ಕೆ 10 ಪರೀಕ್ಷೆಗಳ ನಡೆಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಪರೀಕ್ಷೆಗಳ ಸಂಖ್ಯೆ ಗಣನೀಯವಾಗಿ ಏರಿಕೆ ಮಾಡಿಕೊಂಡು ಬರಲಾಗಿದೆ. ಇಂದು 24 ಗಂಟೆಗಳಲ್ಲಿ ದೇಶಾದ್ಯಂತ 11,72,179 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಸೂಕ್ತ ಸಮಯದಲ್ಲಿ, ತ್ವರಿತ ಕೋವಿಡ್ ಪರೀಕ್ಷೆಗಳಿಂದ ಸೋಂಕು ಪತ್ತೆ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೆ ಸೋಂಕು ಪ್ರಸರಣವನ್ನು ತಡೆಯಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.
ದೇಶದಲ್ಲಿ ಒಟ್ಟಾರೆ 4,55,09,380 ಕೋವಿಡ್ ಪರೀಕ್ಷೆ
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 11,72,179 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಸೆ.2ರವರೆಗೂ 4,55,09,380 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ. ಈ ನಡುವೆ ದೇಶದಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 37,69,524ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 66,333ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಒಂದೇ ದಿನ ದಾಖಲೆಯ 83,883 ಮಂದಿಯಲ್ಲಿ ಸೋಂಕಿತರ ಪತ್ತೆ!
ಗುರುವಾರ ದೇಶದಲ್ಲಿ ಒಂದೇ ದಿನ ದಾಖಲೆಯ 83,883 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಇದು ಕೊರೋನಾ ವೈರಸ್ ಆರಂಭವಾದ ಬಳಿಕ ಜಗತ್ತಿನ ಯಾವುದೇ ದೇಶದಲ್ಲಿ ದಾಖಲಾದ ದೈನಂದಿನ ಅತಿ ಗರಿಷ್ಠ ಸಂಖ್ಯೆಯ ಸೋಂಕು ಎನಿಸಿಕೊಂಡಿದೆ. ವಿಶ್ವದ ಯಾವುದೇ ದೇಶದಲ್ಲಿ ಒಂದೇ ದಿನ 83 ಸಾವಿರ ಪ್ರಕರಣಗಳು ದಾಖಲಾದ ನಿದರ್ಶನ ಇಲ್ಲ. ಅಮೆರಿಕದಲ್ಲಿ ಜು.24ರಂದು 78,586 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ವಿಶ್ವದಲ್ಲೇ ಅತಿ ಗರಿಷ್ಠ ಎನಿಸಿಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ಗಿಂತಲೂ ಹೆಚ್ಚಿನ ಸೋಂಕು ಭಾರತದಲ್ಲೇ ದಾಖಲಾಗುತ್ತಿದೆ. ದೇಶದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಮೂರನೇ ಬಾರಿ 80 ಸಾವಿರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ ದಾಖಲೆಯ 83,883 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,53,407ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದೇ ದಿನ 1043 ಮಂದಿ ಸಾವನ್ನಪ್ಪಿದ್ದು, ಮಹಾಮಾರಿ ವೈರಸ್ ಈ ವರೆಗೂ ದೇಶದಲ್ಲಿ ಒಟ್ಟು 67,376 ಮಂದಿಯನ್ನು ಬಲಿಪಡೆದುಕೊಂಡಿದೆ. ಇನ್ನು 38,53,407ಕ್ಕೆ ಮಂದಿ ಸೋಂಕಿತರ ಪೈಕಿ ದೇಶದಲ್ಲಿ 29,70,493 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿನ್ನೂ 8,15,538 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.