

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರ ಸೂಚನೆಯಂತೆ 4ನೇ ತರಗತಿ ವಿದ್ಯಾರ್ಥಿಯೊಬ್ಬ ಮಂಗಳವಾರ ಸಿಟ್‌ಅಪ್ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ 10 ವರ್ಷದ ವಿದ್ಯಾರ್ಥಿ ರುದ್ರ ನಾರಾಯಣ ಸೇಠಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ತರಗತಿಯ ಸಮಯದಲ್ಲಿ ಶಾಲೆಯ ಆವರಣದಲ್ಲಿ ನಾಲ್ವರು ಸಹ ವಿದ್ಯಾರ್ಥಿಗಳೊಂದಿಗೆ ಆಟವಾಡುತ್ತಿದ್ದನು. ಇದನ್ನು ಗಮನಿಸಿದ ಶಿಕ್ಷಕರೊಬ್ಬರು ಆತನಿಗೆ ಶಿಕ್ಷೆಯಾಗಿ ಸಿಟ್-ಅಪ್ ಮಾಡಲು ಸೂಚಿಸಿದ್ದಾರೆ.
ಸಿಟ್-ಅಪ್ ಮಾಡುವ ವೇಳೆ ವಿದ್ಯಾರ್ಥಿ ಕುಸಿದು ಬಿದ್ದಿದ್ದು, ತಕ್ಷಣ ಸಮೀಪದ ರಸೂಲ್‌ಪುರ ಬ್ಲಾಕ್‌ನ ಓರಾಲಿ ಗ್ರಾಮದ ನಿವಾಸಿಗಳಾಗಿರುವ ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ನಂತರ ಶಿಕ್ಷಕರು ವಿದ್ಯಾರ್ಥಿಯನ್ನು ಹತ್ತಿರದ ಸಮುದಾಯ ಕೇಂದ್ರಕ್ಕೆ ಮತ್ತು ಅಲ್ಲಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಅಂತಿಮವಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ರಸುಲ್‌ಪುರ ಶಿಕ್ಷಣ ಅಧಿಕಾರಿ(ಬಿಇಒ) ನೀಲಾಂಬರ್ ಮಿಶ್ರಾ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.