

ನವದೆಹಲಿ: ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಪರಿಸ್ಥಿತಿ ನಡುವೆಯೇ, ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ (Bilateral Trade Agreement - BTA) ಕುರಿತ ಮಾತುಕತೆಗಳನ್ನು ಮುಂದುವರಿಸಲು ಭಾರತೀಯ ಉನ್ನತ ಮಟ್ಟದ ಪ್ರತಿನಿಧಿ ತಂಡವು ಏಪ್ರಿಲ್ 20ರಿಂದ 22ರವರೆಗೆ ಅಮೆರಿಕಾ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಮಾಹಿತಿ ನೀಡಿದ್ದು, ಈ ತಂಡವನ್ನು ಕೇಂದ್ರ ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ನೇತೃತ್ವ ವಹಿಸಲಿದ್ದು, ಹಲವು ಪ್ರಮುಖ ವ್ಯಾಪಾರ, ಸುಂಕ ಮತ್ತು ನೀತಿ ಸಂಬಂಧಿತ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಸುಮಾರು ಮೂರುರಿಂದ ನಾಲ್ಕು ತಿಂಗಳ ಬಳಿಕ ಎರಡೂ ದೇಶಗಳ ಪ್ರತಿನಿಧಿಗಳು ಮುಖಾಮುಖಿಯಾಗಿ ಭೇಟಿಯಾಗುತ್ತಿರುವುದು ಗಮನಾರ್ಹವಾಗಿದೆ.
ಈ ಅವಧಿಯಲ್ಲಿನ ನೇರ ಸಂವಾದವು ಒಪ್ಪಂದದ ಅಂತಿಮ ಹಂತದ ನಿರ್ಧಾರಗಳಿಗೆ ವೇಗ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 7ರಂದು ಪ್ರಕಟವಾದ ಜಂಟಿ ಹೇಳಿಕೆಯ ನಂತರ ಕೈಗೊಳ್ಳಬೇಕಾದ ಕಾನೂನುಬದ್ಧ ಕ್ರಮಗಳನ್ನು ಪೂರ್ಣಗೊಳಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಗಳಲ್ಲಿ ಅಮೆರಿಕಾ ಸುಪ್ರೀಂಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಸುಂಕಗಳನ್ನು ಅಕ್ರಮ ಎಂದು ಘೋಷಿಸಿದ ತೀರ್ಪು ಮಹತ್ವದ ತಿರುವು ನೀಡಿದೆ. ಈ ತೀರ್ಪಿನ ಪರಿಣಾಮವಾಗಿ ಅಮೆರಿಕಾ ತನ್ನ ವಾಣಿಜ್ಯ ನೀತಿಯಲ್ಲಿ ಬದಲಾವಣೆ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಸಹ ತನ್ನ ತಂತ್ರವನ್ನು ಮರುಪರಿಶೀಲಿಸಿದೆ.
ಇದೇ ವೇಳೆ, ಸೆಕ್ಷನ್ 301 ಕ್ರಮಗಳ ಕುರಿತು ಭಾರತವು ಅಮೆರಿಕಾ ವ್ಯಾಪಾರ ಪ್ರತಿನಿಧಿ ಕಚೇರಿ (USTR)ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿರುವುದು ಮತ್ತೊಂದು ಪ್ರಮುಖ ಅಂಶವಾಗಿದೆ.
ಸೆಕ್ಷನ್ 301 ಅಡಿಯಲ್ಲಿ ಅಮೆರಿಕಾ ಹಲವು ದೇಶಗಳ ಕೈಗಾರಿಕಾ ನೀತಿಗಳು ಮತ್ತು ವ್ಯಾಪಾರ ಪ್ರಕ್ರಿಯೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಭಾರತವೂ ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಮುಂದಾಗಿದೆ. ಈ ವಿಚಾರವು ಎರಡೂ ದೇಶಗಳ ನಡುವಿನ ಪ್ರಮುಖ ವಿಚಾರವಾಗಿದ್ದು, ಭೇಟಿ ವೇಳೆ ಗಂಭೀರ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಆರಂಭಿಕ ಯೋಜನೆಯ ಪ್ರಕಾರ BTA ಒಪ್ಪಂದವನ್ನು ಮಾರ್ಚ್ ಮಧ್ಯಭಾಗದಲ್ಲೇ ಅಂತಿಮಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ನ್ಯಾಯಾಲಯದ ತೀರ್ಪಿನ ನಂತರ ಅಮೆರಿಕಾ ಮೊದಲು ವಿಧಿಸಿದ್ದ 25% ಹೆಚ್ಚುವರಿ ಸುಂಕವನ್ನು ಹಿಂಪಡೆದು, 1974ರ ಟ್ರೇಡ್ ಆಕ್ಟ್‌ನ ಸೆಕ್ಷನ್ 122 ಅಡಿಯಲ್ಲಿ 10% ಸುಂಕವನ್ನು ವಿಧಿಸಿದೆ.
ಈ ಬದಲಾವಣೆ ಜಾಗತಿಕ ವ್ಯಾಪಾರ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಿದ್ದು, ಭಾರತ ಸೇರಿದಂತೆ ಅನೇಕ ದೇಶಗಳು ತಮ್ಮ ವ್ಯಾಪಾರ ತಂತ್ರಗಳನ್ನು ಮರುಹೊಂದಿಸಿಕೊಳ್ಳಬೇಕಾದ ಪರಿಸ್ಥಿತಿ ಎದರಾಗಿದೆ.
ಇದಲ್ಲದೆ, ಜಾಗತಿಕ ಮಟ್ಟದಲ್ಲಿ ಉಂಟಾದ ಅಸ್ಥಿರತೆ ಭಾರತದ ವಾಣಿಜ್ಯ ಅಂಕಿಅಂಶಗಳ ಮೇಲೂ ಪರಿಣಾಮ ಬೀರಿದೆ. ಮಾರ್ಚ್ ತಿಂಗಳಲ್ಲಿ ಭಾರತದ ರಫ್ತು 7.44% ಇಳಿಕೆಯಿಂದ 38.92 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಇದು ಕಳೆದ ಐದು ತಿಂಗಳಲ್ಲೇ ಗರಿಷ್ಠ ಕುಸಿತವಾಗಿದೆ.
ಮಧ್ಯಪ್ರಾಚ್ಯ ಸಂಕಷ್ಟ, ಸಾಗಾಟದ ಅಡಚಣೆಗಳು ಮತ್ತು ತೈಲ ಬೆಲೆಗಳ ಏರಿಕೆ ಇದರ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಆಮದುಗಳಲ್ಲಿಯೂ 6% ಕ್ಕಿಂತ ಹೆಚ್ಚು ಇಳಿಕೆ ದಾಖಲಾಗಿರುವುದು ಜಾಗತಿಕ ಬೇಡಿಕೆ ಕುಸಿತದ ಸೂಚಕವಾಗಿದೆ.
ಈ ಹಿನ್ನೆಲೆ, ಭಾರತ–ಅಮೆರಿಕಾ ನಡುವಿನ ಮುಂದಿನ ಮಾತುಕತೆಗಳು ಕೇವಲ ವಾಣಿಜ್ಯ ಒಪ್ಪಂದದ ಮಟ್ಟಕ್ಕೆ ಸೀಮಿತವಾಗದೇ, ಜಾಗತಿಕ ಆರ್ಥಿಕ ಸಮತೋಲನದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿವೆ.
ಸುಂಕಗಳ ಸಮತೋಲನ, ಮಾರುಕಟ್ಟೆ ಪ್ರವೇಶ, ತಂತ್ರಜ್ಞಾನ ಸಹಕಾರ ಮತ್ತು ಸರಬರಾಜು ಸರಪಳಿ ಬಲಪಡಿಸುವ ವಿಷಯಗಳಲ್ಲಿ ಎರಡೂ ದೇಶಗಳು ಸಾಮರಸ್ಯ ಸಾಧಿಸಿದರೆ, ಇದು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಮಾತುಕತೆಗಳ ಫಲಿತಾಂಶವೇ ಭಾರತ–ಅಮೆರಿಕಾ ಆರ್ಥಿಕ ಸಂಬಂಧಗಳ ದಿಕ್ಕು ನಿರ್ಧರಿಸಲಿದೆ.
Advertisement