

ಬೆಂಗಳೂರು: ತಮಿಳುನಾಡು ರಾಜ್ಯದೊಂದಿಗೆ ದಶಕಗಳಿಂದ ಇರುವ ಕಾವೇರಿ ವಿವಾದವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ಬೆಂಗಳೂರಿನ ಲಗ್ಗೆರೆಯ ಮುನೇಶ್ವರ ಬಡಾವಣೆಯಲ್ಲಿ ಜೆಡಿಎಸ್ ಮುಖಂಡ ಚಂದ್ರಶೇಖರ್ ಅವರು ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಂಚಾರಿ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೇವೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ವೇಳೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಕುಡಿಯುವ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಏಕೆ ಎಂಬ ನಿರ್ಲಕ್ಷ್ಯ ಮನೋಭಾವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದಾರೆ. ಆದರೆ, ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಮುಂದೆ ಏನಾಗಬಹುದೋ ಎಂಬ ಆತಂಕ ನನ್ನನ್ನು ಕಾಡುತ್ತಿದೆ ಎಂದು ತಮ್ಮ ಆತಂಕ ವ್ಯಕ್ತ ಪಡಿಸಿದರು.
"ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ 2007ರಲ್ಲಿ ಕಾವೇರಿ ನ್ಯಾಯಾಧೀಕರಣದ ತೀರ್ಪು ಬಂದಿದೆ. ಒಟ್ಟು ಮೂರನೇ ಎರಡು ಭಾಗದಷ್ಟು ನೀರನ್ನು ಬೆಂಗಳೂರಿಗೆ ಹಂಚಿಕೆ ಮಾಡಲಾಗಿಲ್ಲ. ನ್ಯಾಯಾಧೀಕರಣದ ತೀರ್ಪಿನಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚೆತ್ತುಕೊಂಡ ನಾನು ಸುಪ್ರೀಂಕೋರ್ಟ್‌ಗೆ ವಿಶೇಷ ತಕರಾರು ಅರ್ಜಿ ಹಾಕಿಸಿದ್ದೇನೆ. ಹೈತೀರ್ಪು ನೀಡಿದ್ದ ನ್ಯಾಯಾಧೀಕರಣದಿಂದಲೂ ಸಣ್ಣ ಪ್ರಮಾಣದ ಸ್ಪಷ್ಟೀಕರಣ ಕೇಳಲಾಗಿದೆ".
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಕುರಿತು ನಿರ್ಲಕ್ಷ್ಯತೆಯಿಂದ ಇದ್ದಾರೆ. ಮುಂದಿನ ದಿನಗಳಲ್ಲಿ ನ್ಯಾಯಾಲಯಗಳ ತೀರ್ಪು ಆಧರಿಸಿ ನೀರನ್ನು ಅಳತೆ ಮಾಡಿ ಹಂಚುತ್ತಾರೆ. ಆಗ ಅನ್ಯಾಯದ ಅರಿವು ಸರ್ಕಾರಕ್ಕಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ರಾಜ್ಯ-ರಾಜ್ಯಗಳ, ದೇಶ-ದೇಶಗಳ ನಡುವೆ ಯುದ್ಧ ನಡೆಯಲಿದೆ" ಎಂದು ದೇವೇಗೌಡ ಅವರು ಮುನ್ನೆಚ್ಚರಿಕೆ ನೀಡಿದರು.