ರಾಜಕೀಯ

ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ ಆರ್'ಎಸ್ಎಸ್ ನಾಯಕರ ಪಾದಪೂಜೆ ಮಾಡಲೇಬೇಕು: ಬೊಮ್ಮಾಯಿಗೆ ಸಿದ್ದರಾಮಯ್ಯ

ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ ಆರ್'ಎಸ್ಎಸ್ ನಾಯಕರ ಪಾದಪೂಜೆ ಮಾಡಲೇಬೇಕು: ಬೊಮ್ಮಾಯಿಗೆ ಸಿದ್ದರಾಮಯ್ಯ
ಸಿದ್ದರಾಮಯ್ಯ
Published On :

ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ನೀವು ಆರ್‌ಎಸ್‌ಎಸ್‌ ನಾಯಕರ ಮನೆಗೆ ತೆರಳಿ ಪಾದಪೂಜೆ ಮಾಡಲೇಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರ ಅಕ್ರಮದ ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಕಳುಹಿಸಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಸದ್ಯಕ್ಕೆ ದೇಶದ ಪ್ರಧಾನಿ ಮೋದಿಯವರು ರಾಹುಲ್ ಗಾಂಧಿ ಅಲ್ಲ ಎನ್ನುವುದು ನಿಮ್ಮ ನೆನಪಲ್ಲಿ ಇರಲಿ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ನಾಯಕರ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿಯವರೇ ತನಿಖೆ ನಡೆಸಿ ಶಿಕ್ಷೆ ಕೊಡಬೇಕಾದರೆ ಮೊದಲು ಪ್ರಧಾನಿ ಮೋದಿ ಮತ್ತು ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ನಾವು ಮಾಡುತ್ತೇವೆ.

ಕೊಟ್ಟ ಕುದರೆ ಏರಲಿಕ್ಕಾಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಗಾದೆಯನ್ನು ಮತ್ತೆ ಮತ್ತೆ ನಿಜಮಾಡಲು ಹೊರಟಿರುವ ಬೊಮ್ಮಾಯಿ ಅವರೇ, ವಿರೋಧಪಕ್ಷಗಳ ವಿರುದ್ಧ ಆರೋಪ ಮಾಡಿಕೊಂಡು ಕಾಲಕಳೆಯುತ್ತಾ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ. 

ಅಕ್ರಮಗಳು ಯಾರ ಕಾಲದಲ್ಲಿ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಾ ಬಂದವನು ನಾನು. ಇದಕ್ಕಾಗಿಯೇ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೇ ನ್ಯಾಯಾಂಗ ತನಿಖೆ ನಡೆಸಬೇಕೆಂದು ಹಿಂದೆ ಮಾಡಿರುವ ಒತ್ತಾಯವನ್ನು ಪುನರುಚ್ಚರಿಸುತ್ತೇನೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ನೀವು ಕಾಣಬಯಸಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ನಮ್ಮ ನಾಯಕರು ಜನಮತದ ಬೆಂಬಲದಿಂದಲೇ ಪ್ರಧಾನಿಯಾಗುವವರು. ನಿಮ್ಮ ಹಾಗೆ ಆಪರೇಷನ್ ಕಮಲದ ಮೂಲಕ ಆ ಸ್ಥಾನಕ್ಕೆ ಏರುವವರಲ್ಲ ಎಂದು ಕುಟುಕಿದ್ದಾರೆ. 

ನಿಮ್ಮ ಖಾಲಿ ಡಬ್ಬದ ಸದ್ದಿಗೆ ಹೆದರುವವರು ಯಾರೂ ಇಲ್ಲ. ನಿಮ್ಮ ಧಮ್ –ತಾಖತ್ ಗಳ ಮಾತುಗಳೆಲ್ಲವೂ ಸಾರ್ವಜನಿಕ ಸಭೆಗಳಿಗಷ್ಟೇ ಸೀಮಿತ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ನೀವು  ಆರ್ ಎಸ್ ಎಸ್ ನಾಯಕರ ಮನೆಗೆ ತೆರಳಿ ಪಾದಪೂಜೆ ಮಾಡಲೇಬೇಕು. ಸಾರ್ವಜನಿಕ ಸಭೆಗಳಲ್ಲಿ ವಿರೋಧ ಪಕ್ಷದ ವಿರುದ್ಧ ಅಬ್ಬರಿಸುತ್ತಿರುವ ನಿಮಗೆ, ನೀವು ಎರಡುವರೆ ಸಾವಿರ ಕೋಟಿ ದುಡ್ಡು ಕೊಟ್ಟು ಮುಖ್ಯಮಂತ್ರಿಯಾಗಿದ್ದೀರಿ ಎಂದು ಆರೋಪ ಮಾಡುತ್ತಿರುವ ನಿಮ್ಮದೇ ಪಕ್ಷದ ಒಬ್ಬ ಶಾಸಕನ ವಿರುದ್ಧ ಸೊಲ್ಲೆತ್ತುವ ಧೈರ್ಯ ಇಲ್ಲ. ಇದೆಂತಹ ನಿಮ್ಮ ಹೇಡಿತನ. 

ಕಾಂಗ್ರೆಸ್ ನಾಯಕರ ಬಗ್ಗೆ ರಾಹುಲ್ ಗಾಂಧಿ ಅವರಿಂದಲೇ ನೀವು ತನಿಖೆ ಮಾಡಿಸುವುದಾದರೆ ಡಿಕೆ.ಶಿವಕುಮಾರ್ ವಿರುದ್ಧ ಇಡಿ, ಐಟಿಗಳನ್ನು ಯಾಕೆ ಛೂ ಬಿಟ್ಟಿದ್ದೀರಿ? ಈ ಸಂಸ್ಥೆಗಳು ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸಿ, ಆ ಪ್ರಕರಣಗಳನ್ನೆಲ್ಲ ರಾಹುಲ್ ಗಾಂಧಿಯವರಿಗೆ ಕಳಿಸಿಬಿಡಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.