

ಶೀಘ್ರದಲ್ಲೇ ಆರಂಭಗೊಳ್ಳಲಿರುವ ಭಾರತ ವಿರುದ್ಧ ಸೀಮಿತ ಓವರ್‍ಗಳ ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಅನುಭವಿ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮುನ್ನಡೆಸುವ ಸಾಧ್ಯತೆಗಳಿವೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಂಡದ ನಾಯಕ ಸ್ಟೀವನ್ ಸ್ಮಿತ್ ಇನ್ನೂ ಆ ಸಮಸ್ಯೆಯಿಂದ ಬರಬಂದಿಲ್ಲವಾದ್ದರಿಂದ ಭಾರತ ವಿರುದ್ಧದ ಏಕದಿನ ಸರಣಿಗೆ ಅವರು ಅಲಭ್ಯವಾಗಲಿರುವುದು ಬಹುತೇಕ ನಿಶ್ಚಿತವಾಗಿದೆ. ಹಾಗಾಗಿ, ಅವರ ಅನುಪಸ್ಥಿತಿಯಲ್ಲಿ, ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆನ್ನಲಾಗಿದೆ.
ಮೊಣಕಾಲು ನೋವಿನಿಂದ ಬಳಲುತ್ತಿರುವ ಸ್ಮಿತ್, ಹಾಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹಿಂದೆ ಸರಿದಿದ್ದಾರೆ. ಅವರಿನ್ನೂ ಚಿಕಿತ್ಸೆಯಲ್ಲಿದ್ದಾರೆ. ತಂಡದ ಆಯ್ಕೆ ಮಂಡಳಿ ಹಾಗೂ ತಂಡದ ವೈದ್ಯಕೀಯ ಸಿಬ್ಬಂದಿ ಅವರಿಗೆ ದೀರ್ಘಕಾಲದ ವಿಶ್ರಾಂತಿಗೆ ಸೂಚಿಸಿದ್ದಾರೆ. ಇದೇ ವರ್ಷದ ಬಿಗ್ ಬ್ಯಾಷ್ ಪಂದ್ಯಾವಳಿಯ ಆರಂಭಿಕ ಸುತ್ತಿನ ಪಂದ್ಯಗಳಲ್ಲೇ ಅವರು ಮೊಣಕಾಲು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಕೆಲಕಾಲ ವಿಶ್ರಾಂತಿಯ ತರುವಾಯ, ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಗೂ ಅವರು ಆಯ್ಕೆಯಾಗಿದ್ದರು ಆದರೆ, ಆ ಸರಣಿಯ ಅಂತ್ಯದಲ್ಲಿ ಅವರು ಪುನಃ ಮೊಣಕಾಲು ನೋವಿಗೆ ಗುರಿಯಾದರು.
ಸ್ಮಿತ್ ಅವರಿಗೆ ಕೆಲ ಕಾಲ ದೂರ ಉಳಿಯಲಿದ್ದಾರೆಂದು, ತಂಡದ ಕೋಚ್ ಡರೇನ್ ಲೇಮನ್ ಸಹ ಹೇಳಿದ್ದಾರೆ. ``ನಾಯಕತ್ವದ ಹೊಣೆಗಾರಿಕೆ ಬಲು ದೊಡ್ಡದು. ಇದರಿಂದ ತಮ್ಮ ಮೇಲೆ ಹೆಚ್ಚು ಒತ್ತಡವಾಗುತ್ತಿರುವುದರ ಬಗ್ಗೆ ಖುದ್ದಾಗಿ ಅವರೇ ತಿಳಿಸಿದ್ದರು. ಸದ್ಯಕ್ಕೆ ಸ್ಮಿತ್ ಅವರಿಗೆ
ವಿಶ್ರಾಂತಿ ನೀಡಿದ್ದೇವೆ. ಕೆಲವು ದಿನಗಳ ನಂತರ ಚೇತರಿಸಿಕೊಂಡು ಅವರು, ಪುನಃ ಕಣಕ್ಕಿಳಿಯಲಿದ್ದಾರೆ'' ಎಂದು ಅವರು ತಿಳಿಸಿದರು.