

ಭಾರತೀಯ ಕ್ರಿಕೆಟ್ ಟೀಂನ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನೀಗ ಇಂಡಿಯಾ 'ಎ' ಟೀಂ ಮತ್ತು ಅಂಡರ್ 19 ಕ್ರಿಕೆಟ್ ಟೀಂನ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಸೂಕ್ತ ಆಯ್ಕೆ ಎಂಬುದು ಒಪ್ಪತಕ್ಕದ್ದು. ಬಿಸಿಸಿಐ ರಾಹುಲ್ ದ್ರಾವಿಡ್‌ಗೆ ಈ ಜವಾಬ್ದಾರಿಯನ್ನು ನೀಡಿರುವುದಕ್ಕೆ ಕಾರಣಗಳೇನು ಗೊತ್ತಾ?
ಎ ಟೀಂ ಮೇಲೆ ಹೆಚ್ಚಿನ ಒತ್ತಡವಿದೆ, ಅದನ್ನು ನಿಭಾಯಿಸುವವರು ಬೇಕು
ಹೌದು, ಭಾರತದ ಎ ಲಿಸ್ಟ್ ಟೀಂನಲ್ಲಿ ಪೈಪೋಟಿಯ ಒತ್ತಡ ಜಾಸ್ತಿ ಇದೆ. ಅದನ್ನು ಚೆನ್ನಾಗಿ ನಿಭಾಯಿಸಬಲ್ಲವರು ತಂಡಕ್ಕೆ ಅಗತ್ಯವಿದೆ. ತಂಡಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿ ಸ್ಫೂರ್ತಿ ತುಂಬಲು ತಕ್ಕ ವ್ಯಕ್ತಿ, ದ ವಾಲ್- ರಾಹುಲ್ ದ್ರಾವಿಡ್
ಸ್ಫೂರ್ತಿ, ಧೈರ್ಯ ತುಂಬುವ ವ್ಯಕ್ತಿ
ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸರಾಸರಿ 52.31 ಹೊಂದಿದ್ದಾರೆ ರಾಹುಲ್. ಹೀಗಿರುವಾಗ ಹೊಸ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬಲ್ಲ ವ್ಯಕ್ತಿ ಎಂದರೆ ರಾಹುಲ್ ಮಾತ್ರ
ಯೋಚಿಸಿ, ಮುಂದೆ ಸಾಗಿ
ರಾಹುಲ್ ಹೊಡೆಬಡಿ ದಾಂಡಿಗ ಅಲ್ಲ. ಕ್ರೀಸ್‌ನಲ್ಲಿ ನಿಂತರೆ ಪ್ರತಿಯೊಂದು ಹೆಜ್ಜೆಯನ್ನೂ ತುಂಬಾ ಆಲೋಚಿಸಿ ಮುಂದಿಡುಡುವ ಕ್ರಿಕೆಟಿಗ. ಇವರ ನೇತೃತ್ವದಲ್ಲಿ ಯುವ ಕ್ರಿಕೆಟ್ ತಂಡ ಸಮಯದ ಮಹತ್ವ ಹಾಗೂ ಆಲೋಚನೆಯಿಂದ ಹೆಜ್ಜೆಯಿಡುವ ಪಾಠ ಕಲಿಯಲಿದೆ. ತಂಡಕ್ಕೆ ಅಗತ್ಯವಿರುವ ಸಮಯಗಳಲ್ಲಿ ಮುಂದಾಲೋಚನೆಯಿಂದ ಆಡಿ ಪಂದ್ಯಗಳನ್ನು ಗೆಲ್ಲಿಸುವ ಕಲೆಯಲ್ಲಿ ರಾಹುಲ್ ಸಿದ್ಧ ಹಸ್ತರು.
ಶಿಸ್ತಿನ ಸಿಪಾಯಿ
ತಂಡದಲ್ಲಿ ಮಾತ್ರವಲ್ಲ ತಂಡ ಹೊರಗೂ ಶಿಸ್ತು ಪಾಲಿಸುವ ಕ್ರಿಕೆಟಿಗ ರಾಹುಲ್. ಅವರ ಆಟದ ಜತೆಗೆ ಗುಣ ನಡತೆಗಳಲ್ಲೂ ಶಿಸ್ತು ಪಾಲಿಸುವ ಮೂಲಕ ತಮ್ಮ ವ್ಯಕ್ತಿತ್ವದ ತೂಕ ಹೆಚ್ಚಿಸಿಕೊಂಡವರು. ಇಂಥವರಿಂದ ಹೊಸ ಪೀಳಿಕೆ ಕಲಿಯಬೇಕಾದುದು ಸಾಕಷ್ಟಿದೆ.
ಆಕ್ರೋಶವಿರಬೇಕು ಆದರೆ ಬಾಯಿ ಮಾತಲ್ಲಿ ಅಲ್ಲ, ಆಟದಲ್ಲಿ
ಸ್ಫೋರ್ಟ್ಸ್ ಮೆನ್ ಸ್ಪಿರಿಟ್ ಅನ್ನೋದು ಪ್ರತಿಯೊಬ್ಬ ಆಟಗಾರನಲ್ಲಿ ಇರಬೇಕಾದ ಪ್ರಮುಖ ಅಂಶ. ಆಟದ ವೇಳೆ ಕೋಪ ಬಂದರೆ ಅದನ್ನು ಬೈದು ತೋರಿಸುವುದಲ್ಲ, ಆಟದ ಮೂಲಕ ತೋರಿಸಬೇಕು. ಸಿಟ್ಟನ್ನು ನಿಭಾಯಿಸುವ ವಿದ್ಯೆ, ಕ್ರೀಸ್‌ನಲ್ಲಿ ಸಂಯಮ ಪಾಲಿಸುವ ಕಲೆ ರಾಹುಲ್ ದ್ರಾವಿಡ್‌ರಿಂದಲೇ ಕಲಿಯಬೇಕು.
ಸಮರ್ಪಣಾ ಭಾವ
ಟೀಂ ಹೇಳಿದರೆ ಗಾಜು ತುಂಡುಗಳ ಮೇಲೆಯೂ ರಾಹುಲ್ ನಡೆಯಬಲ್ಲರು ಎಂದು ರಾಹುಲ್ ದ್ರಾವಿಡ್‌ನ ವಿಧೇಯತೆಯ ಬಗ್ಗೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧು ಹೇಳಿದ್ದರು. ಕ್ರಿಕೆಟ್ ಮೇಲಿರುವ ಪ್ರೀತಿ, ಸಮರ್ಪಣಾ ಭಾವ ರಾಹುಲ್ ಅವರ ಕ್ರಿಕೆಟ್ ಜೀವನದಲ್ಲಿ ಕಾಣಬಹುದು. ಯುವ ಕ್ರಿಕೆಟಿಗರಿಗೆ ರಾಹುಲ್ ಈ ಮೂಲಕ ಮಾದರಿಯಾಗಬಲ್ಲರು
ಮಾನವೀಯತೆಯೇ ಪ್ಲಸ್ ಪಾಯಿಂಟ್
ಮಾನವೀಯತೆ ಮತ್ತು ಜನರೊಂದಿಗೆ ಬೆರೆಯುವ, ಹೊಂದಿಕೊಳ್ಳುವ ಗುಣ ಕ್ರಿಕೆಟಿಗರಲ್ಲಿ ಇರಬೇಕು. ಅದು ರಾಹುಲ್ ದ್ರಾವಿಡ್ ಅವರ ಪ್ಲಸ್ ಪಾಯಿಂಟ್.
ರಾಹುಲ್ ಅಂದ್ರೆ ರಾಹುಲ್ ಮಾತ್ರ
ಯುವ ಕ್ರಿಕೆಟಿಗರಿಗೆ ರೋಲ್ ಮಾಡೆಲ್ ಆಗಬಲ್ಲವರು ರಾಹುಲ್. ಭಾರತೀಯ ಕ್ರಿಕೆಟ್ ತಂಡದ ಗೋಡೆ ಎಂದೇ ಖ್ಯಾತರಾಗಿರುವ ರಾಹುಲ್ ಅವರ ಸರಳತೆ ಹಾಗೂ ಸಂಯಮದ ಆಟ, ನಡೆ ನುಡಿಗಳು ಕ್ರಿಕೆಟ್ ಲೋಕದ ಒಳಗೂ ಹೊರಗೂ ಅವರನ್ನು Mr.Perfectionist ಆಗಿ ಮಾಡಿದೆ.