

ಬೆಂಗಳೂರು: `ಟೀಂ ಇಂಡಿಯಾ ಆರಂಭಿಕರ ಸ್ಥಾನದಲ್ಲಿರುವ ಶಿಖರ್ ಧವನ್‍ಗೆ ನಾನೊಬ್ಬ ಪ್ರತಿಸ್ಪರ್ಧಿ- ಹೀಗೆಂದು ಕರ್ನಾಟಕದ ಕ್ರಿಕೆಟಿಗ ಕೆ.ಎಲ್. ರಾಹುಲ್ ಹೇಳಿದ್ದಾರೆ.
ಖಾಸಗಿ ಆಂಗ್ಲ ಪತ್ರಿಕೆಯೊಂದಿಗೆ ರಾಹುಲ್ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಅವರು ಟೀಂ ಇಂಡಿಯಾದಲ್ಲಿ ಆಡಬೇಕಿತ್ತು. ಆದರೆ, ಧೋನಿ ಪಡೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವ ಮುನ್ನವೇ ಅವರು ಗಾಯದ ಸಮಸ್ಯೆಗೊಳಗಾಗಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅವರು, ಟೀಂ ಇಂಡಿಯಾ ಆರಂಭಿಕರ ಸ್ಥಾನಕ್ಕೆ ನಾನೊಬ್ಬ ಸ್ಪರ್ಧಿಯಾಗಿದ್ದು, ಈಗಾಗಲೇ ಆರಂಬಿsಕರಾಗಿ ಉತ್ತಮ ಹೆಸರು ಮಾಡಿರುವ ಶಿಖರ್ ಧವನ್‍ಗೆ ತಾವು ಪ್ರತಿಸ್ಪರ್ಧಿ ಎಂದಿದ್ದಾರೆ.
ಶಿಖರ್ ಧವನ್ ಒಬ್ಬ ಅತ್ಯುತ್ತಮ ಬ್ಯಾಟ್ಸ್‍ಮನ್. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲಿ ಅವರ ಪ್ರತಿಭೆಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಆರಂಭಿಕ ಆಟಗಾರರಾಗಿ ಅವರು, ಟೆಸ್ಟ್ ಮಾತ್ರವಲ್ಲ ಮೂರೂ ಆವೃತ್ತಿಗಳ ಕ್ರಿಕೆಟ್‍ನಲ್ಲೂ ಉತ್ತಮವಾಗಿ ಆಡುತ್ತಾರೆ. ಬಾಂಗ್ಲಾದೇಶ ಪ್ರವಾಸಕ್ಕೆ ನಾನು ಆಯ್ಕೆಯಾಗಿದ್ದಾಗ, ನಾನು ಅವರ ಸ್ಥಾನವನ್ನು ಕಬಳಿಸಿದ್ದೆ. ಆದರೆ, ನಾನು ಗಾಯದ ಸಮಸ್ಯೆಗೆ ಸಿಲುಕಿದಾಗ ಅವರು ಪುನಃ ಅವರ ಆರಂಭಿಕರ ಸ್ಥಾನವನ್ನು ಪಡೆದರು. ಆದರೂ, ಆರಂಭಿಕರ ಸ್ಥಾನಕ್ಕೆ ನಾನು ಅವರ ಪ್ರತಿಸ್ಪರ್ಧಿ ಎಂದಿದ್ದಾರೆ. ಅಲ್ಲದೇ, ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡ ಅವರು, ತಂಡವೊಂದರಲ್ಲಿ ಇಂಥದ್ದೊಂದು ಆರೋಗ್ಯಕರ ಸ್ಪರ್ಧೆಯಿರಬೇಕು ಎಂದೂ ಹೇಳಿಕೊಂಡಿದ್ದಾರೆ.
ಆದದ್ದೆಲ್ಲಾ ಒಳಿತೇ ಆಯಿತು
ಗಾಯಗೊಂಡಿದ್ದರಿಂದಾಗಿ ಬಾಂಗ್ಲಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದಕ್ಕೆ ರಾಹುಲ್ ಅವರಿಗೆ ಬೇಸರವೇನೂ ಇಲ್ಲವಂತೆ. ಈಗ ಗಾಯದ ಸಮಸ್ಯೆಯಿಂದ ಹೊರಬಂದಿರುವ ಅವರು, ನಗರದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಅಭ್ಯಾಸ ಮುಂದುವರಿಸಿದ್ದಾರೆ. ಈ ಸಮಯವನ್ನು ಅವರಲ್ಲಿನ ಕ್ರಿಕೆಟ್ ಕಲೆಗೆ ಸಾಣೆ ಹಿಡಿಯಲು ಬಳಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಹೇಳಿಕೊಂಡ ಅವರು, `ಸದ್ಯಕ್ಕೆ ಬಿಡುವಿನಲ್ಲಿದ್ದೇನೆ. ಕಠಿಣ ಅಭ್ಯಾಸದಲ್ಲಿ ತೊಡಗಿದ್ದೇನೆ. ನನ್ನ ಬ್ಯಾಟಿಂಗ್‍ನಲ್ಲಿ ನಾನು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳಲು, ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ಈ ಸಮಯವನ್ನು ಉಪಯೋಗಿಸಿಕೊಳ್ಳುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ.