

ಕಾನ್ಪುರ: ಭಾರತ-ದ.ಆಫ್ರಿಕಾ ಏಕದಿನ ಸರಣಿ ನಿಮಿತ್ತ ಭಾನುವಾರ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಗೆಲ್ಲಲು 304 ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆರಂಭದಿಂದಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಆರಂಭಿಕರಾದ ಡಿ ಕಾಕ್ ಮತ್ತು ಹಷೀಮ್ ಆಮ್ಲಾ ತಂಡಕ್ಕೆ 45 ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಬಂದ ಡುಪ್ಲೆಸಿಸ್ ಮತ್ತು ಎಬಿ ಡಿವಿಲಿಯರ್ಸ್ ಜೋಡಿ ಭಾರತದ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ನೋಡ ನೋಡುತ್ತಿದ್ದಂತೆಯೇ ಡುಪ್ಲೆಸಿಸ್ ಅರ್ಧಶತಕ ದಾಖಲಿಸಿ ಔಟಾದರೆ ಬ್ಯಾಟಿಂಗ್ ಮುಂದುವರೆಸಿದ ಎಬಿಡಿವಿಲಿಯರ್ಸ್ ಅಮೋಘ ಶತಕ ದಾಖಲಿಸಿದರು. ಕೇವಲ 73 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ ಬರೋಬ್ಬರಿ 104 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಬೆಹರಡೀನ್ 35 ರನ್ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಕೇವಲ 5 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ, ಭಾರತಕ್ಕೆ ಗೆಲ್ಲಲು 304 ರನ್ ಗಳ ಗುರಿ ನೀಡಿದೆ. ಭಾರತದ ಪರ ಉಮೇಶ್ ಯಾದವ್ ಮತ್ತು ಅಮಿತ್ ಮಿಶ್ರಾ ತಲಾ 2 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ 1 ವಿಕೆಟ್ ಪಡೆದರು. ಇತ್ತೀಚಿನ ವರದಿಗಳು ಬಂದಾಗ ಭಾರತ 3 ಓವರ್ ಗಳಲ್ಲಿ 13 ರನ್ ಗಳಿಸಿತ್ತು.