

ಢಾಕಾ: ಕ್ರಿಕೆಟ್ ರಂಗದ ಪಾಲಿಗೆ ಭಾನುವಾರ ಮಹತ್ವದ ದಿನವಾಗಿದ್ದು, ಅಂಡರ್ 19 ವಿಶ್ವಕಪ್ ನ ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡದ ಮಾಜಿ ನಾಯಕ ಮತ್ತು ಹಾಲಿ ಅಂಡರ್ 19 ಭಾರತ ಕ್ರಿಕೆಟ್ ತಂಡ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತ ತಂಡ ವಿಶ್ವಕಪ್ನ ಫೈನಲ್ನಲ್ಲಿ ಅಜೇಯವಾಗಿ ಫೈನಲ್ ತಲುಪಿದೆ. ಇನ್ನೊಂದು ಗೆಲುವು ಭಾರತದ ಮುಡಿಗೆ ಮತ್ತೊಂದು ವಿಶ್ವಕಪ್ ಗರಿಯನ್ನು ಸಿಕ್ಕಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್ ಗೆದ್ದಲ್ಲಿ ಭಾರತ ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಚಾಂಪಿಯನ್ ಆದ ಹಿರಿಮೆಗೆ ಪಾತ್ರವಾಗಲಿದೆ. ಇನ್ನು ವೆಸ್ಟ್ ಇಂಡೀಸ್ ಕೂಡ 2ನೇ ಬಾರಿಗೆ ಕಿರಿಯರ ವಿಶ್ವಕಪ್ ಫೈನಲ್ಗೇರಿರುವ ಚೊಚ್ಚಲ ಟ್ರೋಫಿಯ ತವಕದಲ್ಲಿದೆ.
ಟೂರ್ನಿಯಲ್ಲಿ ಆಡಿರುವ ಎಲ್ಲಾ 5 ಪಂದ್ಯಗಳನ್ನು ಗೆದ್ದಿರುವ ಇಶಾನ್ ಕಿಶನ್ ಸಾರಥ್ಯದ ಭಾರತ ಕಿರಿಯರ ತಂಡ ಈ ಬಾರಿಯ ಫೇವರಿಟ್ ತಂಡವೆನಿಸಿದೆ. ಆದರೆ ಲೀಗ್ನ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ ಸೋತು ಅಭಿಯಾನ ಆರಂಭಿಸಿದ ವಿಂಡೀಸ್ ನಂತರ ಎಲ್ಲಾ ಪಂದ್ಯಗಳಲ್ಲಿ ಅಚ್ಚರಿಯ ಗೆಲುವಿನೊಂದಿಗೆ ಫೈನಲ್ ತನಕ ಬಂದಿರುವುದು ಗಮನಾರ್ಹ ಸಂಗತಿಯಾಗಿದೆ. ಹೀಗಾಗಿ ಭಾರತಕ್ಕೆ, ಬಲಿಷ್ಠ ಆಲ್ರೌಂಡ್ ವಿಭಾಗವುಳ್ಳ ವಿಂಡೀಸ್ ಪ್ರಬಲ ಪ್ರತಿಸ್ಪರ್ಧೆ ನೀಡುವುದರಲ್ಲಿ ಎರಡು ಮಾತಿಲ್ಲ.
33 ವರ್ಷಗಳ ಬಳಿಕ ಫೈನಲ್ ನಲ್ಲಿ ಭಾರತ-ವಿಂಡೀಸ್ ಮುಖಾಮುಖಿ
ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಫೈನಲ್ ಪಂದ್ಯಕ್ಕೆ ಐತಿಹಾಸಿಕ ಹಿನ್ನಲೆಯನ್ನು ತಳುಕು ಹಾಕಲಾಗುತ್ತಿದ್ದು, ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ಭಾರತ ಮತ್ತು ವಿಂಡೀಸ್ ತಂಡ 33 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಎದುರಾಗುತ್ತಿವೆ. ಈ ಹಿಂದೆ 1983ರಲ್ಲಿ ಲಂಡನ್ನಲ್ಲಿ ನಡೆದ ಹಿರಿಯರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಉಭಯ ತಂಡಗಳು ಯಾವುದೇ ಮಾದರಿಯ ವಿಶ್ವಕಪ್ ಫೈನಲ್ನಲ್ಲಿ ಎದುರಾಗಿರಲಿಲ್ಲ. ಅಂದು ಕಪಿಲ್ ದೇವ್ ಸಾರಥ್ಯದ ಭಾರತ ತಂಡ 43ರನ್ಗಳಿಂದ ಪಂದ್ಯ ಜಯಿಸಿ ಇತಿಹಾಸ ನಿರ್ವಿುಸಿತ್ತು.
ಇನ್ನು ಈ ಬಾರಿಯ ವಿಶ್ವಕಪ್ ಅನ್ನು ಕೂಡ ಜಯಿಸುವ ಮೂಲಕ 4 ಬಾರಿ ವಿಶ್ವಕಪ್ ಜಯಿಸಿದ ಏಕೈಕ ತಂಡವೆಂಬ ಸಾಧನೆ ಮಾಡುವ ವಿಶ್ವಾಸದಲ್ಲಿ ಭಾರತ ತಂಡವಿದೆ. ಭಾರತ 2000, 2008, 2012ರಲ್ಲಿ ಚಾಂಪಿಯನ್ ಆಗಿದ್ದರೆ, ಒಮ್ಮೆ (2006) ರನ್ನರ್ಅಪ್ ಆಗಿತ್ತು. ಆಸ್ಟ್ರೇಲಿಯಾ ಕೂಡಾ 3 ಬಾರಿ ಪ್ರಶಸ್ತಿ ಗೆದ್ದಿದೆ. ವಿಂಡೀಸ್ 2004ರ ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಸೋತಿತ್ತು.