ನಮಗ್ಯಾವ ಹಕ್ಕಿದೆ?

ನಾವೊಬ್ರು ವೋಟು ಮಾಡೊದ್ರಿಂದ ಮಹಾ ಅಭಿವೃದ್ಧಿ ಏನು ಆಗಲಿಕ್ಕಿಲ್ಲ ಅಂತಲೇ ಇಟ್ಟುಕೊಳ್ಳೋಣ....
ನಮಗ್ಯಾವ ಹಕ್ಕಿದೆ?
Updated on: 

ನಾವೊಬ್ರು ವೋಟು ಮಾಡೊದ್ರಿಂದ ಮಹಾ ಅಭಿವೃದ್ಧಿ ಏನು ಆಗಲಿಕ್ಕಿಲ್ಲ ಅಂತಲೇ ಇಟ್ಟುಕೊಳ್ಳೋಣ. ಆದ್ರೆ ನಾವು ವೋಟು ಮಾಡ್ದೆ ಇರೋದ್ರಿಂದ ದೇಶಕ್ಕೆ, ರಾಜ್ಯಕ್ಕೆ ನಷ್ಟ ಆಗಬಾರದು.

ಗೆಳೆಯರೆ, ಮೇ 5 ನಮ್ಮ ಮುಂದಿನ ಐದು ವರ್ಷದ ಭವಿಷ್ಯ ನಿರ್ಧಾರವಾಗುವ ದಿನ. ಈ ಭವಿಷ್ಯ ನಿರ್ಧಾರಕ್ಕಾಗಿ ಚುನಾವಣಾ ಆಯೋಗ ಮತದಾನದ ಜಾಗೃತಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖುಷಿಯ ವಿಚಾರ. ಪ್ರಜೆಗಳಿಗಿರುವ ಮೂಲಭೂತ ಹಾಗೂ ಮಹತ್ವದ ಹಕ್ಕು ಮತದಾನದ ಬಗ್ಗೆಯೇ ಜನತೆ ಯಾಕೋ ಸ್ವಲ್ಪ ಉದಾಸೀನ ತೋರಿಸುತ್ತಿದ್ದಂತಿದೆ. ಪ್ರಜೆಗಳು ಮತದಾನದ ಶಕ್ತಿಯ ಬಗ್ಗೆಯೆ ಸಂಶಯ ಪಡುತ್ತಿರುವುದು ಮತ್ತು ಮತ ಚಲಾವಣೆಯನ್ನೆ ನಿರ್ಲಕ್ಷ್ಯ ತೋರುತ್ತಿರುವುದು ಮಾತ್ರ ಆಘಾತಕಾರಿ. ಇದರ ಕುರಿತು ನನ್ನ ಅನುಭವಕ್ಕೆ ಬಂದ ಕೆಲವು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
 "ಯಾರು ಗೆದ್ದು ಬಂದರೇನು?" ಇವರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಕೆಲವರ ಅಳಲಾದರೆ ಇನ್ನೂ ಕೆಲವರು, ನನಗೆ ಮತ ನೀಡುವ ಮನಸ್ಸಿದೆ. ಆದರೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಯಾವ ಅಭ್ಯರ್ಥಿಯ  ಅರ್ಹನಂತೆ ಕಾಣಿಸುತ್ತಿಲ್ಲ. ಹೀಗಾಗಿ ನಾನು ಮತ ಚಲಾಯಿಸುತ್ತಿಲ್ಲ ಎಂಬುದು. ಇವರುಗಳ ಯೋಚನೆಯ ಪ್ರಕಾರ ಯಾವ ಅಭ್ಯರ್ಥಿ ಗೆದ್ದರೂ ಅಭಿವೃದ್ಧಿಯ ಕಡೆಗೆ ಗಮನ ಹರಿಸೋದಿಲ್ಲ. ಅವರಿಗೆ ತಮ್ಮ ಜೀವಮಾನಕ್ಕೆ ಆಗುವಷ್ಟು ದುಡ್ಡು ಗಳಿಸುವುದು, ಆಸ್ತಿ ಮಾಡುವುದರ ಕಡೆಗೆ ಗಮನ. ಹೀಗಾಗಿ ನಾವು ಮತ ಚಲಾಯಿಸಿ ಇಂಥವರನ್ನು ಆರಿಸುವುದರಲ್ಲಿ ಏನು ಸುಖವಿದೆ ಎಂಬ ಪ್ರಶ್ನೆ.
ಈ ದೇಶವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಬೇಕಾದ ಪ್ರಜೆಗಳಾದ ನಾವು ಯಾರು ಗೆದ್ದರೂ ಅಭಿವೃದ್ಧಿ ಸಾಧ್ಯ ಇಲ್ಲ. ಎಲ್ಲರೂ ಸ್ವಾರ್ಥಿಗಳು ಎನ್ನುವ ನಕಾರಾತ್ಮಕ ಧೋರಣೆ ಇಟ್ಟುಕೊಳ್ಳುವುದು ಎಷ್ಟು ಸರಿ? ಯಾವ ಅಭ್ಯರ್ಥಿಯು ಅರ್ಹನಿಲ್ಲ ಎಂದರೆ ಹೇಗೆ? ಇದ್ದ ಅಭ್ಯರ್ಥಿಗಳಲ್ಲಿಯೇ ಅರ್ಹರಿಗೆ ಮತ ಚಲಾಯಿಸುವ ಪರಿಸ್ಥಿತಿಯಲ್ಲಿದ್ದೇವೆ. ಅದನ್ನು ಒಪ್ಪಿಕೊಂಡು ನಮ್ಮ ಕರ್ತವ್ಯ ಮಾಡಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇರುವ ನಾವು ಯಾರೊಬ್ಬರ ಮೇಲಾದರು ನಂಬಿಕೆ ಇಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ಈ ವ್ಯವಸ್ಥೆಯಲ್ಲಿ ಬದುಕುವುದೇ ದುಸ್ಥರವಾಗಬಹುದು.
ಇನ್ನು ಪರ ಊರಿಗೆ ಕಲಿಯಲು ಹಾಗೂ ಕೆಲಸಕ್ಕಾಗಿ ಬಂದವರು, "ಅಯ್ಯೋ ನಾ ಒಬ್ಬ ವೋಟುಮಾಡ್ಲಿಲ್ಲ ಅಂದ್ರ ಏನ ಲುಕ್ಸಾನ ಆಗುದು ಐತಿ ಬಿಡೊ" ಎಂಬ ನಿರ್ಲಕ್ಷ್ಯದ ಹಾಗೂ ಸೋಂಬೇರಿತನದ ಮಾತು ಹೇಳುತ್ತಾರೆ. ನಾವೊಬ್ರು ವೋಟು ಮಾಡೊದ್ರಿಂದ ಮಹಾ ಅಭಿವೃದ್ಧಿ ಏನು ಆಗಲಿಕ್ಕಿಲ್ಲ ಅಂತಲೇ ಇಟ್ಟುಕೊಳ್ಳೋಣ. ಆದ್ರೆ ನಾವು ವೋಟು ಮಾಡ್ದೆ ಇರೋದ್ರಿಂದ ದೇಶಕ್ಕೆ, ರಾಜ್ಯಕ್ಕೆ ನಷ್ಟ ಆಗಬಾರದು. ಇಂಥದ್ದೇ ಆಲೋಚನೆಯ ಮತದಾರರಿಂದ ಆಕಸ್ಮಾತ್ ಒಬ್ಬ ಒಳ್ಳೆಯ ಅಭ್ಯರ್ಥಿ ಸೋತರೆ ಆಗೇನು ಗತಿ?
ಅಣ್ಣಾ ಹಜಾರೆ ಕೈಗೊಂಡ ಭ್ರಷ್ಟಾಚಾರ ವಿರುದ್ಧದ ಹಾಗೂ ಲೋಕಪಾಲ ಮಸೂದೆಯ ಅನುಷ್ಠಾನಕ್ಕೆ ಒತ್ತಾಯಿಸಿ ಕೈಗೊಂಡ ಪ್ರತಿಭಟನೆಯಲ್ಲಿ ದೇಶದ ಪ್ರಜೆಗಳು ವಿಶೇಷವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಈ ಭ್ರಷ್ಟಾಚಾರದ ವಿರುದ್ಧದ ಅಲೆ ದೇಶಕ್ಕೆ ಹೊಸ ಚೈತನ್ಯ ತಂದು ಕೊಡುವ ಆಶಾಭಾವನೆ ಮೂಡಿಸಿತ್ತು. ಆದರೆ ಪ್ರತಿಭಟನೆಯಲ್ಲಿ ಕಿಚ್ಚಿನಿಂದ ಭಾಗವಹಿಸುವ ನಮ್ಮ ಜನ ಮತದಾನದ ವಿಷಯದಲ್ಲಿ ಜಾಗೃತನಾಗುತ್ತಿಲ್ಲ.
ಭ್ರಷ್ಟರಿಗೆ ಪಾಠ ಕಲಿಸುವಲ್ಲಿ ಮತದಾನಕ್ಕಿಂತ ಶಕ್ತಿಯುತವಾದ ಅಸ್ತ್ರ ಮತ್ತೊಂದಿಲ್ಲ. ಆದರೆ ಈ ಕರ್ತವ್ಯ ನೆರವೇರಿಸುವುದರಲ್ಲಿ ಅಕ್ಷರಸ್ಥರು ಉದಾಸೀನ ಮಾಡುತ್ತಿರುವುದು ಕಳವಳಕಾರಿಯಾಗಿದೆ. ನಮ್ಮ ಉಜ್ವಲ ಭವಿಷ್ಯ ನಮ್ಮ ಮತದಲ್ಲೇ ಅಡಗಿದೆ. ಪ್ರತಿಭಟನೆ ನಡೆಸುವುದರಲ್ಲೇ ನಿಸ್ಸೀಮರಾಗುತ್ತಿರುವ ನಾವು 5 ವರ್ಷಕ್ಕೆ ಒಮ್ಮೆ ಬರುವ ಚುನಾವಣೆಯ ದಿನ ಮುಂದಿನ ಅವಧಿಯ ನಮ್ಮ ಪ್ರತಿನಿಧಿಗಳನ್ನು ಚುನಾಯಿಸುವ ಜವಾಬ್ದಾರಿಯನ್ನು ನಿರ್ವಹಿಸದಿದ್ದರೆ ರಾಜಕಾರಣಿಗಳೆಲ್ಲ ಭ್ರಷ್ಟರು, ಸ್ವಾರ್ಥಿಗಳು ಇವರಿಂದ ಅಭಿವೃದ್ಧಿ ಸಾಧ್ಯ ಇಲ್ಲ ಎಂದು ದೂರಲು ನಮಗ್ಯಾವ ಹಕ್ಕಿದೆ?

- ತುಷಾರ ಜೋಷಿ, ಕವಿವಿ, ಧಾರವಾಡ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com