ಹಸಿಯೂಟ

ಬಿಸಿಯೂಟ ಗೊತ್ತು. ಹಸಿಯೂಟ ಗೊತ್ತಾ? 'ಹಸಿಯೂಟ ಅಂದ್ರೆ ಅದೇ ಅನಾಗರಿಕತೆ ಕಾಲದ್ದಾ?' ಅಂತ ಕೇಳ್ಬೇಡಿ. ಈ ಹಸಿಯೂಟ...
ಹಸಿಯೂಟ
Updated on: 

ಬಿಸಿಯೂಟ ಗೊತ್ತು. ಹಸಿಯೂಟ ಗೊತ್ತಾ? 'ಹಸಿಯೂಟ ಅಂದ್ರೆ ಅದೇ ಅನಾಗರಿಕತೆ ಕಾಲದ್ದಾ?' ಅಂತ ಕೇಳ್ಬೇಡಿ. ಈ ಹಸಿಯೂಟ ಬಿಸಿಯೂಟಕ್ಕಿಂತ ಒಂದು ತುತ್ತು ಜಾಸ್ತಿಯೇ ಸೇರುತ್ತೆ.
ಮೊನ್ನೆ ಬಾಗಲಕೋಟೆಯ ಗುಳೇದಗುಡ್ಡದಲ್ಲಿ ವಿಶೇಷ ಶಿಬಿರ ನಡೀತು. ಗಂಗಾವತಿಯ ವಿರುಪಾಕ್ಷ ಗುರೂಜಿ ನೇತೃತ್ವದ ಈ ಶಿಬಿರಕ್ಕೆ ಹೋದವರ ನಾಲಗೆಗೆ ಕಾದಿದ್ದು ಅಚ್ಚರಿ. ಅಲ್ಲಿ ಸಾಲು ಸಾಲಾಗಿ ಸತ್ಸಂಗಿಗಳು ಕೈಯಲ್ಲಿ ಚೂರಿ, ಚಾಕು, ಕತ್ತಿ ಹಿಡಿದು ಕೂತಿದ್ದರು. ಅವರೆದುರು ಸೌತೆಕಾಯಿ, ಬೀಟ್‌ರೂಟ್, ಗಜ್ಜರಿ, ಕ್ಯಾಬೇಜ್ ಕೋಸು, ರಾಜಗೀರ ಬೀನ್ಸ್, ಹಿರೇಕಾಯಿ ಟೊಮೇಟೊ, ಮೆಂತ್ಯೆ, ಕೊತ್ತಂಬರಿ, ಕರಿಬೇವು, ಮೊಳಕೆಯೊಡೆದ ಹೆಸರು, ಕಡಲೆ, ಶೇಂಗಾ, ನಿಂಬೆಹಣ್ಣು, ಅವಲಕ್ಕಿ ರಾಶಿಗಳಿದ್ದವು...
ನೋಡ ನೋಡುತ್ತಲೇ ಅವೆಲ್ಲ ಚಕಚಕ ತಮ್ಮ ರೂಪ ಬದಲಿಸಿ ಸಿಪ್ಪೆ ಕಳಚಿಕೊಂಡು, ತಿರುಳು ಬೇರ್ಪಡಿಸಿಕೊಂಡು, ಹತ್ತಾರು ಹೋಳಾದವು. ಆ ಅಡುಗೆ ಮನೆಯಲ್ಲಿ ಬೆಂಕಿಯೇ ಇರಲಿಲ್ಲ. ಏಕೆಂದರೆ, ಅವರು ಸಿದ್ಧಗೊಳಿಸುತ್ತಿದ್ದದ್ದು ಹಸಿಯೂಟವನ್ನು!
ಆರೋಗ್ಯಕರ ಆಹಾರ
ಇಂದು ಆಹಾರದ ಮಾರುಕಟ್ಟೆಯನ್ನಾಳುತ್ತಿರುವುದು ಸಿದ್ಧತಿನಿಸುಗಳು. ದಿಢೀರ್ ತಯಾರಿಕೆಯ ತಿನಿಸುಗಳಿಗಂತೂ ಹೆಚ್ಚು ಡಿಮ್ಯಾಂಡಿದೆ. ಇವೆಲ್ಲವೂ ಬಾಯಿಗೆ ರುಚಿಯೇ. ಆದರೂ ಆರೋಗ್ಯಕ್ಕೆ ಯಾವುದೋ ರೀತಿಯಲ್ಲಿ ಪೆಟ್ಟು. ಆದರೆ, ಹಸಿಯೂಟ ಹಾಗಲ್ಲ. ಪೌಷ್ಟಿಕತೆಯ ಕಣಜ.
ಹ್ಞಾಂ, ಇದರಲ್ಲಿ ಮಸಾಲೆಯ ಬೆರಕೆ ಇರೋದಿಲ್ಲ. ಹೆಚ್ಚು ಕೊಬ್ಬಿದೆಯೆಂಬ ಭಯ ಬೇಡ. ಹೀಗೆ ಆಹಾರವನ್ನು ಬೇಯಿಸದೆ ಇರುವುದೇ ಒಂದು ರುಚಿಕಟ್ಟಿನ ತಂತ್ರ. ಮಧುಮೇಹ ಮತ್ತಿತರ ವ್ಯಾಧಿಗಳಿಲ್ಲದೇ ಇರುವವರು  ಯಾವುದೇ ಆಂತಕವಿಲ್ಲದೇ ಸವಿಯಬಹುದು. ಅಷ್ಟಕ್ಕೂ ಇದು ಹಂಡ್ರೆಡ್ ಪರ್ಸೆಂಟ್ ತರಕಾರಿಯೂಟ.
ಏನೇನು ಸ್ಪೆಷೆಲ್?
ಬೀಟ್‌ರೂಟ್ ಪಚಡಿ, ಮಿಶ್ರ ತರಕಾರಿಗಳ ಪಚಡಿ, ಸೊಪ್ಪುಗಳ ಪಚಡಿ, ಮೊಳಕೆ ಬಂದ ಹೆಸರು ಕಾಳಿನ ಕೋಸಂಬರಿ, ಹಸಿರು ಮೊಸರು ಬಜ್ಜಿ, ತರಕಾರಿಗಳ ರಸದ ಶರಬತ್ತು (ಜೀವರಸ), ಫ್ರೂಟ್ ಸಲಾಡ್... ಎಲ್ಲವೂ ಎಲ್ಲವೂ ಕಣ್ಣಿಗೆ ಅಂದ. ಹೊಟ್ಟೆಗೂ ರುಚಿ.
ಶಿಬಿರಾರ್ಥಿಗಳಿಗೆ ಭೋಜನದ ಮೊದಲು ಪ್ರಾರ್ಥನೆ, ನಂತರ ಸೊಪ್ಪಿನಿಂದ ಹಿಂಡಿ ತೆಗೆದ ಜೀವರಸದ ವಿತರಣೆ.  ಆಮೇಲೆ ತರಕಾರಿಗಳ ಫಲಗಳ ಭೋಜನ. ಕರಿದ ಆಹಾರದಲ್ಲಿ ಅಗತ್ಯ ಪೋಷಕಾಂಶಗಳ ನಷ್ಟವಾಗುತ್ತವೆಯಲ್ಲದೆ, ಎಣ್ಣೆಯ ಅಂಶ ಅತಿದೊಡ್ಡ ಪ್ರಮಾಣದಲ್ಲಿ ಶರೀರಕ್ಕೆ ಹೋಗುತ್ತದೆ.
 
ಏನುಪಯೋಗ?
ಹಸಿಯೂಟದಿಂದ ಏನೇನು ಲಾಭ ಅಂತ ಸ್ವಾಮೀಜಿ ಹೇಳಿದರು... ಅವು ಇವು...
ಬಿಸಿ ಆಹಾರ ಸೇವನೆಯಿಂದ ಚಂಚಲತೆ, ಮನಸ್ಸನ್ನು ಪ್ರಚೋದಿಸುವ ಲಾಲಸೆಗಳು ಹುಟ್ಟುತ್ತವೆ. ಹಸಿ ಪದಾರ್ಥಗಳಿಂದ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಮೊಳಕೆಯೊಡೆಯುತ್ತವೆ.
ಹಸಿ ಆಹಾರ ಪಾಕದಿಂದ ಆಯಾಸ, ಬೊಜ್ಜು ತಡೆಗಟ್ಟಬಹುದು.
ಸಂಧಿವಾತದಂಥ ಧೀರ್ಘಕಾಲದ ಕಾಯಿಲೆಗಳನ್ನು, ರಕ್ತದೊತ್ತಡ, ಅರೆ ತಲೆ ಶೂಲೆಗಳಂಥ ಸಮಸ್ಯೆಗಳನ್ನು ದೂರ ತಳ್ಳಬಹುದು.
ಹೃದ್ರೋಗ, ಮಾನಸಿಕ ಅಸ್ವಸ್ಥತೆಯಿಂದ ಮುಕ್ತರಾಗಬಹುದಂತೆ.

-ಪ್ರವೀಣರಾಜು ಸೊನ್ನದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com