

ಭೀಮಸೇನ ಜೋಷಿಯವರ 'ಮಜ್ಜಿಗೆಯೊಳಗಿನ ಬೆಣ್ಣೆಯಂತೆ' ರಾಗಬದ್ಧ ಹಾಡು ಎಂದೋ ನಮ್ಮ ಕಿವಿಯೊಳಗೆ ಹೂತು ಹಸಿರಾಗಿದೆ. ಈಗ ನೈಸರ್ಗಿಕ ಬೆಣ್ಣೆ ಕಾಣಿಸೋದು, ಬರೀ ಅದೊಂದು ಹಾಡಲ್ಲಷ್ಟೇ! ಇಂದಿನ 'ಡೈರಿಯುಗ'ದಲ್ಲಿ ಮನೇಲಿ ಬೆಣ್ಣೆ ತಯಾರಿಸುವ ದೃಶ್ಯಗಳೇ ಕಾಣಿಸುತ್ತಿಲ್ಲ. ಬೆಣ್ಣೆಯನು ಕೇವಲ ಹುಡುಗಿಯರ ಮುಖಕ್ಕೆ ಹೋಲಿಸುವುದು ಈಗಲೂ ಮುಂದುವರಿದಿದೆ. ಆದರೆ, ತಯಾರಿಕೆಯ ಸಂಸ್ಕೃತಿ ಇಲ್ಲ.
ಅದು ನಡುಮನೆಯ ಕಂಬ. ಗಡಿಗೆಯಲ್ಲಿ ಕಡಗೋಲು ಇಟ್ಟು, ಆ ಕೋಲಿಗೂ ಕಂಬಕ್ಕೂ ಹಗ್ಗ ಕಟ್ಟಿರುತ್ತಿದ್ದರು. ಸರ್ರ, ಬರ್ರ ಎನುವ ಸದ್ದಿನೊಂದಿಗೆ ಅಜ್ಜಿ ಮಜ್ಜಿಗೆ ಕಡೆಯುವ ದೃಶ್ಯ ಒಂಥರ ರೀಲು ರೀಲಾಗುತ್ತದೆ. ಆ ಕಡಗೋಲಿನ ಮುಂದೆ ಮಾಸಿದ ಬಟ್ಟೆಯಲ್ಲಿ ಕೂತ ಆ ಅಜ್ಜಿಯೂ ಈಗಿಲ್ಲ. ಬಹುತೇಕ ರೈತರ ಮನೆಗಳಲ್ಲಿ ಮಜ್ಜಿಗೆ ಹುಟ್ಟುವ ಸದ್ದು ಕೇಳಿಸುತ್ತಿಲ್ಲ ಅಂದಾಗ ಇನು ಬೆಣ್ಣೆ ಎಲ್ಲಿಂದ ಬರಬೇಕು? ಈಗೇನಿದ್ದರೂ ನಂದಿನಿ ಮತ್ತಿತರ ಕಂಪನಿಗಳ ಸ್ವಾದವಿಲ್ಲದ ರೆಡಿಮೇಡ್ ಬೆಣ್ಣೆ, ತುಪ್ಪಗಳದ್ದೇ ಭರಾಟೆ.
ಆದರೆ, ಬಾಗಲಕೋಟೆ ತಾಲೂಕಿನ ಹಳೇ ಸಾಳಗುಂದಿಯಲ್ಲೊಬ್ಬರು ಅಜ್ಜಿಯಿದ್ದಾರೆ. ಹೆಸರು ಚಂದ್ರವ್ವ ಮುರನಾಳ. ಇಂದಿಗೂ ಸಾಂಪ್ರದಾಯಿಕ ಬೆಣ್ಣೆ ತಯಾರಿಕೆಯನು ಮರೆತಿಲ್ಲ. ಆಕೆಯ ಬದುಕಿನೊಂದಿಗೆ ಹೈನುಗಾರಿಕೆ ಹಾಸುಹೊಕ್ಕಾಗಿದೆ. ರಾತ್ರಿ ಹೆಪ್ಪು ಹಾಕಿಟ್ಟ ಮೊಸರಿನ ಗಡಿಗೆಯನು ನೆಲುವಿನಿಂದ ಕೆಳಗಿಳಿಸಿ ಮಜ್ಜಿಗೆ ಕಡೆಯುವುದರೊಂದಿಗೆ ಅಜ್ಜಿಯ ದಿನಚರಿ ಆರಂಭವಾಗುತ್ತದೆ.
ಈ ಬೆಣ್ಣೆ ತಯಾರಿಕೆಯಲ್ಲೂ ಅಜ್ಜಿಯ ಶಿಸ್ತಿದೆ. ಬೆಳಗ್ಗೆ ಬೇಗ ಸಾನ ಮಾಡಿ, ಮೊದಲು ಹಣೆಗೆ ವಿಭೂತಿ ಹಚ್ಚಿಕೊಳ್ಳುತ್ತಾಳೆ. ನಂತರವೇ ಆಕೆ ಕಡಗೋಲಿಗೆ ಕೈಹಾಕುವುದು. ಈಕೆಯ ಮುದ್ದೆ ಬೆಣ್ಣೆಗೆ ಮನಸೋಲದವರೇ ಇಲ್ಲ.
ಬೆಣ್ಣೆ ತಯಾರಿ ಹೇಗೆ?
ಚಂದ್ರವ್ವ ಅದೇ ಹಳೆಯ ಪದ್ಧತಿಯಲ್ಲೇ ಬೆಣ್ಣೆ ತಯಾರಿಸುತ್ತಾಳೆ. ಹಿಂದಿನ ದಿನ ರಾತ್ರಿ ಹಸು ಮತ್ತು ಎಮ್ಮೆಯಿಂದ ಕರೆದ ಹಾಲನು ಉಕ್ಕಿ ಬರುವ ಹಾಗೆ ಕಾಯಿಸಿ, ಅದು ತಣಿದಾದ ಮೇಲೆ ಮೊಸರಿನಿಂದ ಹೆಪ್ಪು ಹಾಕುತ್ತಾಳೆ. ನಂತರ ಬೆಳಗಿನ ಜಾವ ಹಾಲಿನ ಮೇಲಿನ ಕೆನೆ ತೆಗೆದು ಮಣ್ಣಿನ ಗಡಿಗೆಯಲ್ಲಿ ಹಾಕಿ ಅದಕ್ಕೆ ತಕ್ಕಂತೆ ತಣ್ಣೀರು ಬೆರೆಸಿ ಕಡಗೋಲಿನಿಂದ ಸ್ವಲ್ಪ ಸಮಯ ಕಡೆಯುತ್ತಾಳೆ. ಅಷ್ಟರಲ್ಲೇ ಬೆಣ್ಣೆ ತೇಲಲು ಶುರು.
ಚಂದ್ರವ್ವ ತಯಾರಿಸುವ ಬೆಣ್ಣೆಗೆ ಭಾರಿ ಬೇಡಿಕೆಯಿದೆ. ಹಿಂದಿನ ದಿನವೇ ಆರ್ಡರ್ ಕೊಟ್ಟು ಹೋಗುವವರೂ ಇದ್ದಾರೆ. ದಿನಕ್ಕೆ ಹತ್ತಾರು ಮಂದಿ ಕಾಯಂ ಗಿರಾಕಿಗಳಿದ್ದಾರೆ. ಆದಾಗ್ಯೂ ಅಷ್ಟಿಷ್ಟು ಬೆಣ್ಣೆ ಉಳಿಸಿಕೊಂಡು ವಾರಕ್ಕೊಮ್ಮೆ ಘಮಗುಡುವ ತುಪ್ಪ ಕಾಯಿಸುವುದೂ ಈಕೆಗೆ ಗೊತ್ತು.
ಬೆಣ್ಣೆ ಕರಗಿ ತುಪ್ಪವಾಗುವ ವೇಳೆ ಇಡೀ ಓಣಿಯೇ ಘಮ ಘಮ ಪರಿಮಳದಿಂದ ತುಂಬಿ ಹೋಗುತ್ತದೆ. ಈ ಓಣಿಯಲ್ಲಿ ಇಂಥ ಪರಿಮಳ ಹರಡಿದರೆ ಸಾಕು ಚಂದ್ರವ್ವಜ್ಜಿ ತುಪ್ಪ ಕಾಯಿಸುತ್ತಿದ್ದಾಳೆಂದೇ ಅರ್ಥ. ಭಾರತೀಯ ಹೈನುಗಾರಿಕೆಯ ಪಳೆಯುಳಿಕೆ ಎಂಬಂತೆ ಈ ಚಂದ್ರವ್ವಜ್ಜಿ ನಮ್ಮ ಮುಂದೆ ಇನೂ ಇದ್ದಾಳೆ. ನಮ್ಮ ಶ್ರೀಮಂತ ಪರಂಪರೆಯನು ತನ ಕಡಗೋಲಿನಿಂದ ಸಾರಿ ಹೇಳುತ್ತಿದ್ದಾಳೆ.
- ವಿಠಲ ಮೂಲಿಮನಿ