ಕಚ್ಚುಮೆಚ್ಚು

'ಕಚ್ಚು...' ಹಾಗಂದರೆ ಅವನು ಕಚ್ಚೋದಿಕ್ಕೆ ಬರೋಲ್ಲ. ಗಣೇಶ ಗೋವಿಂದ ಸಾಮಿಗೆ ಅವನ ಗೆಳೆಯರು ಕರೆಯೋದೇ ಹಾಗೆ.
ಕಚ್ಚುಮೆಚ್ಚು
Updated on: 

'ಕಚ್ಚು...' ಹಾಗಂದರೆ ಅವನು ಕಚ್ಚೋದಿಕ್ಕೆ ಬರೋಲ್ಲ. ಗಣೇಶ ಗೋವಿಂದ ಸಾಮಿಗೆ ಅವನ ಗೆಳೆಯರು ಕರೆಯೋದೇ ಹಾಗೆ. ಡ್ರಮ್ಸ್ ಬಡಿಯೋದು ಅವನ ಹಾಬಿ. ಸಂಗೀತ ಅಂದ್ರೆ ಪ್ರಾಣ. ಅದೇ ಪ್ರೊಫೆಷನ್ ಆಗುತ್ತೆ ಅನ್ನುವ ಕಲ್ಪನೆ ಇರಲಿಲ್ಲ. ಏನಾದರೂ ಹೊಸತಾಗಿ ಮಾಡಿ ಬೇರೆ ಥರ ಬದುಕಬೇಕು ಎಂಬ ಆಸೆಗೆ ಜೊತೆಯಾದದ್ದು ಗೆಳೆಯ ಪ್ರಶಾಂತ್. 'ಇಷ್ಟು ಚೆನ್ನಾಗಿ ಡ್ರಮ್ಸ್ ನುಡಿಸ್ತೀಯ, ನಿನ್ನದೇ ಟೀಮ್ ಪ್ರಾರಂಭಿಸಬಾರದೇಕೆ?' ಅಂದಾಗ ಈ ಬೀಟ್ಸ್ ಕ್ರಿಯೇಟ್ ಮಾಡಿ, 6 ಜನರ 'ಉಒಊಂಊ' ತಂಡ ಶುರು ಮಾಡಿದರು. 13 ವರ್ಷಗಳಿಂದ ಯೂರೋಪ್, ನಾರ್ವೆ, ಶ್ರೀಲಂಕಾ, ಥಾಯ್ಲೆಂಡ್, ಸಿಂಗಾಪುರ, ಮಲೇಶಿಯಾಗಳಲ್ಲಿ ನುಡಿಸುತ್ತಾ, ಕಲಿಸುತ್ತಾ, ಬೆಳೆಯುತ್ತಿದ್ದಾರೆ.
ಒಂಚೂರು ರೀವೈಂಡ್ ಮಾಡಿ ನೋಡಿದರೆ..., ಕಚ್ಚು ಬೆಂಗಳೂರಿನ ಫುಟ್‌ಪಾತ್ ಮೇಲಿದ್ದಾನೆ. 8 ವಯಸ್ಸಿನವನಿದ್ದಾಗ ತಂದೆಯನ್ನು ಕಳೆದುಕೊಂಡು, ಅಮ್ಮ ಅಕ್ಕ ತಂಗಿ ತಮ್ಮಂದಿರೊಡನೆ ಹೊರಬಿದ್ದಾಗ ಅವರಿಗೆ ಯಾರೂ ದಾರಿ ತೋರುವವರಿರಲಿಲ್ಲ. ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಎಂಬಾಸೆಯಿಂದ ತಾಯಿ ಬಾಳೆಹಣ್ಣು ಮಾರಲಾರಂಭಿಸಿ ಕಷ್ಟಪಟ್ಟರು. ಇಂದಿಗೂ ಜಯನಗರದಲ್ಲಿ ಅವರ ಬಾಳೆಹಣ್ಣಿನ ವ್ಯಾಪಾರ ನಡೆದಿದೆ. ಕಚ್ಚು ಅಂಗಡಿಗಳಲ್ಲಿ ಮೂಟೆ ಹೊತ್ತು, ತಾಯಿಗೆ ಜೊತೆಯಾಗಿ ಹಾಗೂ ಹೀಗೂ ಬಿಕಾಂ ಮುಗಿಸಿದರು. ನನ್ನಂಥ ನಿರಾಶ್ರಿತರಿಗೆ ಸಹಾಯ ಮಾಡಬೇಕು ಎಂಬ ಹಂಬಲ.
ನೆರವಿಗೆ ಬಂದ ಸಂಸ್ಥೆಗಳು
'ಸಿಂಗಾಪುರ್ ಇಂಟರ್‌ನ್ಯಾಷನಲ್ ಫೌಂಡೇಶನ್‌'ನ ಸುನೀತಾ ಎನ್ನುವವರು ಪ್ರತಿ ವರ್ಷ ಭಾರತ, ಶ್ರೀಲಂಕಾ, ಕಾಂಬೋಡಿಯಾ ಮುಂತಾದೆಡೆಯ ನಿರಾಶ್ರಿತ ಮಕ್ಕಳಿಗೆ ಕಲ್ಚರಲ್ ಕ್ಯಾಂಪ್ಸ್ ಪ್ರಾಜೆಕ್ಟ್ ಉಚಿತವಾಗಿ ನೀಡುತ್ತಿದ್ದರು. ಅಂತಹ ಒಂದು ಪ್ರಾಜೆಕ್ಟ್‌ಗೆ ಕಚ್ಚು ಹಾಜರಾದ. ಅಲ್ಲಿ ಆತನ ವಿಶಿಷ್ಟ ಗುಣಗಳು ಗೊತ್ತಾದವು. ಪ್ರಾಮಾಣಿಕತೆ, ಸಮಯ ಪರಿಪಾಲನೆ, ಕೈಗೊಂಡ ಕೆಲಸ ಅಚ್ಚುಕಟ್ಟಾಗಿ ಮಾಡುವುದು ಇತ್ಯಾದಿ. ಮುಂದಿನ ಕ್ಯಾಂಪ್‌ಗಳ ಜವಾಬ್ದಾರಿಯನ್ನು ಕಚ್ಚುವಿಗೆ ವಹಿಸಲಾಯಿತು.
ಹಳ್ಳಿಗಳಲ್ಲಿ ಸೇವೆ
ಸಿಂಗಾಪುರದಿಂದ ಪ್ರತಿವರ್ಷ 20-25 ಯುವ ವಿದ್ಯಾರ್ಥಿಗಳು, ಸ್ವಯಂಸೇವಕರು ನಮ್ಮಲ್ಲಿಗೆ ಬಂದು, ಗ್ರಾಮೀಣ, ಬಡ, ನಿರಾಶ್ರಿತ ಮಕ್ಕಳ ಜತೆಗಿದ್ದು, ಅವರಿಗೆ ಭಾಷೆ, ಕರಕುಶಲತೆ, ಟೀಶರ್ಟ್ ಪೇಂಟಿಂಗ್, ಕ್ಲೇ ಮಾಡೆಲಿಂಗ್, ಕಂಪ್ಯೂಟರ್ ಮುಂತಾದವನ್ನು ಕಲಿಸುತ್ತಾರೆ. ಪುಸ್ತಕಗಳನ್ನು ಒಪ್ಪವಾಗಿ ಜೋಡಿಸಿ ಲೈಬ್ರೆರಿ ಸೆಟ್ ಮಾಡಿಕೊಡ್ತಾರೆ. ಹೀಗೆ ಮಾಡುವಾಗ ನಮ್ಮ ಹಳ್ಳಿಯ ಮಕ್ಕಳೊಂದಿಗೆ ಒಂದೇ ಮನೆಯಲ್ಲಿದ್ದು ಅಡುಗೆ ತಿಂಡಿ ಎಲ್ಲಾ ಮಾಡಿ, ಒಟ್ಟಾಗಿ ಹೊಂದಿಕೊಂಡು ಕೆಲ್ಸ ಮಾಡ್ತಾರೆ. ಲೈಬ್ರರಿ ಕಂಡು ಹಳ್ಳಿ ಮಕ್ಳ ಮುಖದಲ್ಲಿ ಮಿನುಗುವ ನಗು ಒಂದೇ ಸಾಕು, ಬೇರೇನೂ ಬೇಡ ಅಂತಾರೆ ಕಚ್ಚು. ಮಾಲೂರಿನ 'ಜೀವಿಕ' (ಜೀತ ವಿಮುಕ್ತ ಕರ್ನಾಟಕ), ಮುಂಬಯಿಯ 'ಆಶ್ರಯ್‌', ಹೀಗೆ ಹಲವಾರು ಎನ್‌ಜಿಓಗಳೊಂದಿಗೆ ಕೈಸೇರಿಸಿ ಬಾಲಕಾರ್ಮಿಕರಿಗೆ, ಎಚ್‌ಐವಿ ಪೀಡಿತ ಮಕ್ಕಳಿಗೆ, ಬೀದಿ ಮಕ್ಕಳಿಗೆ ಸಹಾಯಕರಾಗಿದ್ದಾರೆ. ಪೊಡಗಾನಹಳ್ಳಿ, ಹೆಗ್ಗಡದೇವನ ಕೋಟೆ, ಬಿಳಿಗಿರಿರಂಗನ ಬೆಟ್ಟದ ಸೋಲಿಗರ, ಜೇನು ಕುರುಬರ ಮಕ್ಕಳಿಗೆ ತರಬೇತಿ ನಡೆದಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಲೈಬ್ರರಿ ಜತೆಗೆ ಟಾಯ್ಲೆಟ್ ಕೂಡಾ ಕಟ್ಟಿಕೊಡಲಾಗುತ್ತಿದೆ. ಸಿಂಗಾಪುರದಿಂದ ಇಲ್ಲಿ ಬಂದು ಸೇವೆ ನಡೆಸಲು ಕಾರಣ ಅವರ ಭಾರತ ಪ್ರೀತಿ. ಅಲ್ಲಿ ನೆಲೆಸಿರುವ ಬಹುತೇಕರ ಪೂರ್ವಜರು ಭಾರತದವರಂತೆ. ಭಾರತ ದೇಶದಿಂದ ಉತ್ತಮ ನಾಗರಿಕತೆ, ಪರಂಪರೆ ಪಡೆದಿದ್ದೇವೆ. ಸ್ವಲ್ಪಮಟ್ಟಿಗಾದರೂ ಭಾರತಕ್ಕೆ ಹಿಂದಿರುಗಿಸಬೇಕು ಅಂತಾರೆ, ಸಿಂಗಾಪುರದ ಭಾರತೀಯ, ಕಚ್ಚುಗೆ ರೋಲ್ ಮಾಡೆಲ್ ಆದ ವೈದ್ಯ ಡಾ. ವಿಜಯನ್. ಅವರ ಪೂರ್ವಜರು ಭಾರತೀಯರು. ಪ್ರತಿ ವರ್ಷ ಸಿಂಗಾಪುರದಿಂದ ದಂತ ಚಿಕಿತ್ಸೆಯ ಸಲಕರಣೆಗಳನ್ನು ತಂದು, ಹಳ್ಳಿ ಹಳ್ಳಿಗಳಲ್ಲಿ ಬಡವರ ಸೇವೆ ಮಾಡುತ್ತಾರೆ.
'ಸಿಂಗಾಪುರದವರಿಂದ ತುಂಬಾ ಕಲಿತೆ. ಟೈಂ ಮ್ಯಾನೇಜ್ಮೆಂಟ್, ಯಾವ ರೀತಿಯ ಪ್ರತ್ಯುಪಕಾರ ಬಯಸದೆ ಅವರು ನಮಗೆ ಸಹಾಯ ಮಾಡುವುದು ಕಂಡರೆ ತುಂಬಾ ಗೌರವ. ನನ್ನಂತೆಯೇ ಫುಟ್‌ಪಾತ್‌ನಲ್ಲಿ ಬೆಳೆಯುತ್ತಿರುವವರಿಗೆ ಏನಾದರೂ ಮಾಡಬೇಕೆಂಬ ಆಸೆ ಇನ್ನೂ ಬಲವಾಗಿದೆ' ಅಂತ ನಗೆ ಬೀರ್ತಾರೆ ಗಣೇಶ್. ಅವರ ಮೊ.ಸಂ. 9986300398

- ಗೀತಾ ಶ್ರೀನಿವಾಸನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com