ಧರ್ಮ ಭಾರತೀಯರ ಉಸಿರು, ಅದೇ ಅವರ ರಾಷ್ಟ್ರೀಯತೆ. ಭಾರತ ದೇಶವನ್ನು ಧರ್ಮದ ತಳಹದಿಯ ಮೇಲೆ ಕಟ್ಟಲಾಗಿದೆ. ರಾಜಕೀಯವಾಗಿ ದೇಶಕ್ಕೆ ಏನಾದರೂ ಆಪತ್ತು ಒದಗಿದರೆ ಭಾರತೀಯರು ಸಹಿಸಿಕೊಂಡಾರು. ಆದರೆ ಧಾರ್ಮಿಕವಾಗಿ ಅಪಚಾರವಾದರೆ ಸಹನೆ ಕಳೆದುಕೊಳ್ಳುವರು. ಇದು ಧರ್ಮವೇ ಭಾರತದ ಜೀವನಾಡಿ ಎನ್ನುವುದಕ್ಕೆ ಸಾಕ್ಷಿ. ಧರ್ಮ ಕಲುಷಿತವಾಗುವುದು ಜಾತಿಯ ಸಂಸರ್ಗದಿಂದ. ಜಾತಿ ಧರ್ಮವನ್ನು, ಸಮಾಜವನ್ನು ವಿಘಟಿಸಿ ತುಂಡುತುಂಡಾಗಿಸುತ್ತದೆ. ಇದರೊಡನೆ ರಾಜಕೀಯ ಬೆರೆತಾಗ ದೇಶ ವಿನಾಶವಾಗುತ್ತದೆ. ಅನಂತ ಮತ-ಪಂಥಗಳು ಧರ್ಮದಲ್ಲಿ ಬೆಳೆದರೆ ಅದು ಒಳ್ಳೆಯದೇ. ಆದರೆ ಅವು ರಾಜಕೀಯದೊಡನೆ ಕೈಜೋಡಿಸಿದಾಗ ಧರ್ಮದ ಅಸ್ತಿತ್ವಕ್ಕೆ ಅಪಾಯ ಒದಗುತ್ತದೆ.
ಪ್ರತಿ ಮನುಷ್ಯನಿಗೂ ಅವನದೇ ಆದ ವ್ಯಕ್ತಿತ್ವವಿರುವಂತೆ ಪ್ರತಿ ಜನಾಂಗಕ್ಕೂ ಒಂದು ವ್ಯಕ್ತಿತ್ವವಿದೆ, ನೆರವೇರಿಸಬೇಕಾದ ಉದ್ದೇಶವಿದೆ. ಇತರರಿಗೆ ಅದು ಕೊಡಬೇಕಾದ ಸಂದೇಶವೊಂದಿರುತ್ತದೆ. ಜಗತ್ತಿನ ಚರಿತ್ರೆಯಲ್ಲಿ, ಎಲ್ಲಕ್ಕಿಂತ ಹೆಚ್ಚಿನ ಸಂಕಟವನ್ನೂ, ಪರಾಧೀನತೆಯನ್ನೂ ಅನುಭವಿಸಿದ ರಾಷ್ಟ್ರವೆಂದರೆ ನಮ್ಮದೇ. ಆದರೂ ನಾವು ವಿನಾಶ ಹೊಂದಿಲ್ಲ, ಅಗತ್ಯವಾದಲ್ಲಿ ಕಷ್ಟಗಳನ್ನು ಎದುರಿಸಲು ಸಿದ್ಧರಿದ್ದೇವೆ.
ನಮ್ಮ ದೇಶದಲ್ಲಿ ಅಸಂಖ್ಯಾದ ಪಂಥಗಳು ಆಗಿಹೋಗಿವೆ. ಈಗಲೂ ಅವು ಸಾಕಷ್ಟು ಸಂಖ್ಯೆಯಲ್ಲಿವೆ, ಮುಂದೆಯೂ ಇರುತ್ತವೆ. ಏಕೆಂದರೆ ಇದು ನಮ್ಮ ದೇಶದ ವೈಶಿಷ್ಟ್ಯ. ಆದ್ದರಿಂದ ಭಿನ್ನಭಿನ್ನ ಮತಗಳು-ಸಂಪ್ರದಾಯಗಳು ಇರಬೇಕಾದ್ದು ಸಹಜವೇ. ಆದರೆ ಗುಂಪುಗಾರಿಕೆ-ಮತಾಂಧತೆಗಳು ಮಾತ್ರ ಇರಬಾರದು.
- ಆನಂದ ಎಸ್.ಎನ್.