ಅದೊಂದು ಹಳ್ಳಿ. ಆತನೊಬ್ಬ ರೈತನ ಮಗ. ಆ ಹರೆಯದ ಹುಡುಗ ಅದ್ಭುತ ಕನಸುಗಾರ. ಅಪ್ಪನಿಗೆ ಹೊಲದ ಕೆಲಸಗಳಲ್ಲಿ ಸಹಾಯವಾಗುವುದು, ಹಸುಗಳನ್ನು ಮೇಯಿಸುವುದು ಆತನ ನಿತ್ಯದ ಕಾಯಕವಾಗಿತ್ತು.
ಆತನ ಅದೃಷ್ಟವೋ ಏನೋ ಕೃಷಿಯಲ್ಲಿ ಉತ್ತಮ ಇಳುವರಿ ಬಂತು. ಹಸುಗಳು ದುಪ್ಪಟ್ಟಾದವು. ಹೀಗಿರುವಾಗ ಜಮೆಯಾದ ಅಲ್ಪ ಹಣದಿಂದ ಹಳ್ಳಿಯಲ್ಲೊಂದು ದಿನಸಿ ಅಂಗಡಿ ಹಾಕಿದ. ಅದರ ವ್ಯಾಪಾರವೂ ಚೆನ್ನಾಗಿ ನಡೆಯಿತು. ಕೈಯಲ್ಲಿ ಹಣ ಓಡಾಡಲು ಆರಂಭವಾದಾಗ ಲೇವಾದೇವಿ ಆರಂಭಿಸಿದ. ಅದೂ ಯಶ ಕಂಡಿತು. ಸಣ್ಣಪುಟ್ಟ ಉದ್ಯಮಗಳೂ ಆತನ ಕೈಹಿಡಿದವು. ಒಬ್ಬ ಸ್ನೇಹಿತನ ಸಹಾಯದಿಂದ ಒಂದಿಷ್ಟು ಹಣ ಷೇರು ಮಾರ್ಕೆಟ್ನಲ್ಲಿ ತೊಡಗಿಸಿದ. ಅದರಲ್ಲೂ ಹಣ ದ್ವಿಗುಣವಾಯಿತು. ಆತನ ಯಶೋಗಾಥೆ ಅಷ್ಟಕ್ಕೇ ಮುಗಿಯಲಿಲ್ಲ. ಪಟ್ಟಣದಲ್ಲಿ ದೊಡ್ಡ ಉದ್ದಿಮೆ ಆರಂಭಿಸಿದ. ದೊಡ್ಡ ಬಂಗಲೆ, ಕಾರು ಇತ್ಯಾದಿ ಐಷಾರಾಮಿ ಜೀವನ ಆತನದಾಗಿ, ಸುಂದರ ಹುಡುಗಿಯ ಜತೆ ಮದುವೆಯಾದ.
ಇದ್ದಕ್ಕಿದ್ದಂತೆ ಆತನ ಮುಖದ ಮೇಲೆ ನೀರು ಬಿದ್ದು ಎಚ್ಚರಗೊಂಡಾಗ ಹೊತ್ತಿನ ಜತೆ ಅಪ್ಪನ ಕೋಪವೂ ನೆತ್ತಿಗೇರಿ ಬಕೆಟ್ ಹಿಡಿದು ನಿಂತಿದ್ದ. ಹುಡುಗನ ಕನಸಿನ ರೀಲು ಹರಿದುಹೋಯ್ತು..!
-ಬಿ. ಸೋಮಶೇಖರ್, ಸುರಪುರ