ಎರಡು ಹೆಜ್ಜೆ ಹಿಂದೆ

Updated on: 

ಚಿರತೆಯೊಂದು ಸುಮ್ಮನೆ ನಿಂತಿದೆ. ಅದಕ್ಕೆ ಆನೆ ಎದುರಾಗಿದೆ. ಎರಡೂ ಬಲಾಢ್ಯ ಜೀವಿಗಳೇ. ಚಿರತೆಯ ಉಗುರು ಪರಿಚಿದರೆ, ಪ್ರಸವಕ್ಕಿಂತ ನೂರುಪಟ್ಟು ನೋವು ತಿಂಗಳಾನುಗಟ್ಟಲೆ ಇರುತ್ತದೆ ಅಂತ ಆನೆಗೂ ಗೊತ್ತು. ಹಾಗೆಯೇ, ಆನೆ ದಾಳಿ ಮಾಡಿ ಸೊಂಡಿಲಿನಿಂದ ತನ್ನನ್ನು ಎತ್ತಿಹಾಕಿದರೆ ಪ್ರಾಣ ಎಲ್ಲೋ ಹಾರಿಹೋಗುತ್ತದೆ ಅಂತ ಚಿರತೆಗೂ ಗೊತ್ತು. ಹೀಗಾಗಿ, ಎರಡೂ ಪ್ರಾಣಿಗಳು ತಮ್ಮ ಮುಖಗಳನ್ನು ನೋಡಿಕೊಂಡು ಅಲ್ಲೇ ನಿಂತಿವೆ.
ಹಾಗಂತ ಅಲ್ಲಿ ಆನೆಗೆ ಸೋಲುತ್ತೀನೆಂಬ ಭಯವಿಲ್ಲ. ಚಿರತೆಗೆ ಹೊಟ್ಟೆ ತುಂಬಿದೆ ಅಂತಾನೂ ಅಲ್ಲ. ಒಂದೆರಡು ನಿಮಿಷದ ಬಳಿಕ ಚಿರತೆ ಎರಡು ಹೆಜ್ಜೆ ಹಿಂದೆ ಹಾಕುತ್ತದೆ. ಆನೆಗೆ ಈಗ ಖುಷಿ. ತನ್ನ ನೋಡಿ ಚಿರತೆ ಹೆದರಿದೆ ಅಂತಲೇ ಭ್ರಮೆ ಅದನ್ನು ಆವರಿಸಿಕೊಳ್ಳುತ್ತದೆ. ಮತ್ತೂ ಸುಮ್ಮನಿರದ ಆನೆ ಸೊಂಡಿಲನ್ನೆತ್ತಿ ಘೀಳಿಡಲು ಶುರುಮಾಡುತ್ತದೆ. ಚಿರತೆ ಪುನಃ ಎರಡು ಹೆಜ್ಜೆ ಹಿಂದೆ ಹಾಕುತ್ತದೆ. ಈಗ ಆನೆಗೆ ಇನ್ನೂ ಖುಷಿ. ತನ್ನ ಪೌರುಷವನ್ನು ನೆನೆದು, ತನೆಗೆ ಸಿಗುತ್ತಿರುವ ಗೌರವವನ್ನು ಊಹಿಸಿ ಮತ್ತೂ ಜೋರಾಗಿ ಘೀಳಿಡುತ್ತದೆ. ಚಿರತೆ ಮತ್ತೆ ಎರಡು ಹೆಜ್ಜೆ ಹಿಂದೆ ಹೋಗಿ, ಊಹಿಸಲಾಗದ ವೇಗದಲ್ಲಿ ಆನೆಯ ಮೇಲೆರಗಿ, ನೆತ್ತಿಗೇ ಬಾಯಿ ಕೊಡುತ್ತದೆ. ಭ್ರಮೆಯಲ್ಲೇ ತೇಲುತ್ತಿದ್ದ ಆನೆ ಹೋರಾಟವನ್ನೇ ಮರೆತು, ಮಡಿಯುತ್ತದೆ.
ಬದುಕೂ ಅಷ್ಟೇ. ಒಂದು ಮೌನ ಮುಂದೊಮ್ಮೆ ಮಹಾಕ್ರಾಂತಿಯನ್ನೇ ಬರೆಯಬಲ್ಲದು. ಮೌನದಲ್ಲಿ ಮುಳುಗಿದ ಶಾಂತಸಾಗರಕ್ಕೆ ಸುನಾಮಿ ಎಬ್ಬಿಸುವುದೂ ಗೊತ್ತು. ಶತ್ರುಸೈನ್ಯ ಸುಮ್ಮನಿದೆ ಎಂದರೆ ಅದರೊಳಗೆ ಹೆದರಿಕೆ ಹೊಕ್ಕಿದೆ ಅಂತೇನೂ ಅಲ್ಲ. ಅದು ಮಹಾಯುದ್ಧಕ್ಕಾಗಿ ಕತ್ತಿ ಮಸೆಯುತ್ತಲೂ ಇರಬಹುದು. ಇದು ವ್ಯಕ್ತಿಯ ಮೌನಕ್ಕೂ ಅನ್ವಯಿಸಬಲ್ಲದು. ಯಾವುದೋ ದೊಡ್ಡ ಕಾರ್ಯಕ್ಕೆ ಅವನ ಮೌನ ಮುನ್ನುಡಿಯೂ ಆಗಿರಬಲ್ಲದು.
ಇಂಥ ವೇಳೆ ನಾವು ಗಮನಿಸಬೇಕಾದದ್ದು ಇಷ್ಟೇ. ಎದುರಿಗಿರುವವರ ಅಥವಾ ಜತೆಗೆ ಇರುವವರ ಇಂಥ ವರ್ತನೆಗಳು ನಮ್ಮ ಮಾತಿಗೆ ಬಂಡವಾಳವಾಗಬಾರದು. ಅವರಷ್ಟಕ್ಕೆ ಅವರನ್ನು ಬಿಟ್ಟು, ನಮ್ಮದೆಷ್ಟುಂಟೋ ಅಷ್ಟು ನೋಡಿಕೊಳ್ಳಬೇಕು.
ಒಂದೆರಡು ಹೆಜ್ಜೆ ಹಿಂದೆ ಇಡುತ್ತಿದ್ದಾನೆ ಎಂದರೆ ಅದು ವ್ಯಕ್ತಿಯ ಸೋಲಲ್ಲ. ನಾವು ನಿಬ್ಬೆರಗಾಗಿ ನೋಡಬಹುದಾದ ಜಿಗಿತ ಆತನಿಂದ ಸಾಧ್ಯವಾದರೆ ಆ ಸನ್ನಿವೇಶದಲ್ಲಿ ನಾವು ಚಿಕ್ಕವರಾಗಬೇಕಾಗುತ್ತದೆ. ಹೀಗಾಗಿ, ಇನ್ನೊಬ್ಬರ ಸಾಮರ್ಥ್ಯವನ್ನು ವಿಮರ್ಶಿಸಲು ನಮಗೆ ಯಾವ ಹಕ್ಕೂ ಇರುವುದಿಲ್ಲ.

-  ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com