

ಬೆಂಗ್ಳೂರ ಬಿಸಿಲಾದರೇನು, ಮಂಗ್ಳೂರ ಬಿಸಿಲಾದರೇನು ಮಂಡೆ ಕಾಯದಿರದೆ? ಇನ್ನು ಗುಲ್ಬರ್ಗದ ಬಿಸಿಲನ್ನು ತಣಿಸುವ ಮಾತೆಲ್ಲಿಂದ ಬರಬೇಕು? ರಾಜ್ಯದಲ್ಲೇ ಅತಿ ಕಡಿಮೆ ಮಳೆಯಾಗುವ ಈ ಬಿಸಿಲೂರಿನಲ್ಲಿ 'ಎಸಿ'ಗೆ ಮೈಯ್ಯೊಡ್ಡಿ ಬದುಕುವ ಮಂದಿ ಕೆಲವೇ ಕೆಲವರು. ಮಿಕ್ಕ ಜನರ ಬದುಕಿನ ಬಂಡಿಗೆ ಉಸಿರಾಗಿರುವುದು ನೈಸರ್ಗಿಕ 'ಎಸಿ'ಗಳು.
ಈಗ ಗುಲ್ಬರ್ಗದ ತಾಪಮಾನ 46 ಡಿಗ್ರಿ ಸೆಲ್ಷಿಯಸ್. ಮೈ ಬೆವರಿಗೆ ಪೈಪೋಟಿ ಕೊಟ್ಟು ಕಬ್ಬುಗಳು ಜಲ್ಲೆಯಾಗಿ ರಸದ ಹೊಳೆಯಾಗಿವೆ. ಒಣಗಿದ ತುಟಿಗಳ ಮಧ್ಯೆ ಕಲ್ಲಂಗಡಿ ನೀರಾಗಿದೆ. ಕರೆಂಟಿಲ್ಲದ ಫ್ರಿಡ್ಜನ್ನು ನೋಡಿ ಕುಂಬಾರನ ಮಡಿಕೆ ಗಹಗಹಿಸುತ್ತಿದೆ. ಸೇಬು ಎರಡು ಹೋಳಾಗಿದೆ. ನಿಂಬೆಹಣ್ಣಿನ ಮೇಲೆ ನಂಬಿಕೆ ಹೆಚ್ಚಾಗಿದೆ. ಬಾಡಿದ ಅಜ್ಜಿಗೂ ಮಜ್ಜಿಗೆ ಇಷ್ಟವಾಗಿದೆ. ಎಳೆನೀರಿನ ಹಸಿರುಮೂತಿ ಬಿಳಿಯಾಗಿದೆ.
ಹೌದು, ಇಲ್ಲಿ ಬಿಸಿಲೂ ಕೆಲಸ ಕೊಡುತ್ತದೆ. ಇನ್ನೊಬ್ಬರ ಹೊಟ್ಟೆ ತುಂಬಿಸುತ್ತದೆ. ಬಿಸಿಲೂರಿನ ಮಂದಿ ತಾಪವನ್ನೇ ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಇನ್ನು ಇತರೆ ಜಿಲ್ಲೆಯವರು ಬಿಸಿಲು ಹೆಚ್ಚಾಯಿತೆಂದು ವ್ಯಥೆಪಡುವುದೇಕೆ?
-ಚಿತ್ರ, ಲೇಖನ: ಶೇಷಮೂರ್ತಿ ಅವಧಾನಿ