ಪ್ರಾಯಶಃ ನಾನಾಗ ಹೈಸ್ಕೂಲ್ ಓದುತ್ತಿದ್ದೆ. ಶಾಲೆಯಲ್ಲಿ ಆಶುಭಾಷಣ ಸ್ಪರ್ಧೆ. ನನಗೆ ಬಂದ ವಿಷಯ 'ಲಂಘನಂ ಪರಮೌಷಧಂ'. ನಮಗೆ ಗೊತ್ತಿದ್ದ ಲಂಘನ ಒಂದೇ, ಅದು ಹನುಮಂತನ ಸಮುದ್ರೋಲ್ಲಂಘನ. ಆ ಲಂಘನವನ್ನೇ ಇಟ್ಟುಕೊಂಡು ಐದು ನಿಮಿಷ ನಿರರ್ಗಳವಾಗಿ ಮಾತನಾಡಿದ್ದೆ! ಕೊನೆಯಲ್ಲಿ 'ಹುಡುಗ ಚೆನ್ನಾಗಿ ಮಾತನಾಡಿದ್ದಾನೆ. ಆದರೆ ವಿಷಯವೇ ಅವನಿಗೆ ಗೊತ್ತಿಲ್ಲ. ಲಂಘನ ಎಂದರೆ ಸಂಸ್ಕೃತದಲ್ಲಿ ಉಪವಾಸ' ಎಂದು ತೀರ್ಪುಗಾರರು ಹೇಳಿದಾಗಲೇ ನನಗೆ ಗೊತ್ತಾದದ್ದು.
ಆರೋಗ್ಯಕ್ಕೂ, ಆಹಾರಕ್ಕೂ ನಿಕಟ ಸಂಬಂಧ. ನಮ್ಮ ಹಿರಿಯರು ಅನಾರೋಗ್ಯದ ಚಿನ್ಹೆ ಕಾಣಿಸಿಕೊಂಡಾಗ ಉಪವಾಸದ ಮೊರೆ ಹೋಗುತ್ತಿದ್ದರು. ಏಕಾದಶಿ, ಸಂಕಷ್ಟಿ ಇತ್ಯಾದಿ ಉಪವಾಸಗಳ ಹಿಂದಿನ ತರ್ಕವೂ ಇದೇ. ಇವತ್ತು ಉಪವಾಸದ ಹೆಸರಿನಲ್ಲಿ ಭರ್ಜರಿ ಫಲಾಹಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ ಬಿಡಿ. ಏನಾದರೂ ಆರೋಗ್ಯದ ತೊಂದರೆ ಬಂದಾಗ ಡಾಕ್ಟರಲ್ಲಿ ಹೋಗುತ್ತೇವೆ. ಅವರು ಮೊದಲು ಕೇಳುವುದೇ 'ಏನು ತಿಂದಿರಿ' ಎಂದು. ಇವತ್ತಿನ ನಮ್ಮ ಆಹಾರ ಸಂಸ್ಕೃತಿ ಹೇಗಾಗಿದೆ ಎಂದರೆ ತಿನ್ನುವಾಗ ಆರೋಗ್ಯ ಪ್ರಜ್ಞೆಯೇ ಇರುವುದಿಲ್ಲ. ಅತಿಯಾಗಿ ತಿಂದರೂ ಅನಾರೋಗ್ಯ, ಕಡಿಮೆ ತಿಂದರೂ ಅನಾರೋಗ್ಯ ಎನ್ನುವುದನ್ನು ಮರೆತೇ ಬಿಡುತ್ತೇವೆ. ನಮ್ಮ ಮೈಯ್ಯಾಸ್ ತಿನಿಸುಗಳಿರಬಹುದು, ಹೋಟೆಲ್ ತಿಂಡಿಗಳಿರಬಹುದು. ಪೌಷ್ಟಿಕಾಂಶ ಮತ್ತು ಕ್ಯಾಲರಿ ಲೆಕ್ಕಕ್ಕೆ ನಾವು ಒತ್ತು ಕೊಡುವುದು ಇದೇ ಕಾರಣಕ್ಕೆ.
ಆರೋಗ್ಯ ಮ್ಯಾಗಜಿನ್‌ಗಳನ್ನು ಅಥವಾ ಪತ್ರಿಕೆಗಳಲ್ಲಿ ಆರೋಗ್ಯ ವಿಷಯಗಳನ್ನು ಆಸಕ್ತಿಯಿಂದ ಓದುವವರು ಗಮನಿಸಿರಲಿಕ್ಕೆ ಸಾಕು. ವೈದ್ಯಕೀಯ ಸಂಶೋಧನೆಗಳ ದಿಕ್ಕೂ ಈಗ ಆಹಾರದತ್ತಲೇ ತಿರುಗಿದೆ ಎನ್ನುವುದು. ಮೊದಲೆಲ್ಲ ದೇಹದ ಅಂಗಾಂಗಳ ಕಾರ್ಯನಿರ್ವಹಣೆ, ವೈರಸ್‌ಗಳು ಮತ್ತಿತರ ವಿಚಾರಗಳ ಬಗ್ಗೆ ರೀಸರ್ಚ್‌ಗಳು ನಡೆಯುತ್ತಿದ್ದವು. ಕಾಲ ಬದಲಾದಂತೆ ಆಹಾರ ಪದ್ಧತಿ ಹೇಗೆ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎನ್ನುವುದರ ಬಗ್ಗೆ ವೈದ್ಯ ವಿಜ್ಞಾನಿಗಳ ಕುತೂಹಲ. ಆಹಾರದಲ್ಲಿನ ಯಾವ ಪದಾರ್ಥ ಕೊಲೆಸ್ಟರಾಲ್ ಹೆಚ್ಚಿಸುತ್ತದೆ? ಯಾವ ತರಕಾರಿ ತಿಂದರೆ ಯಾವ ಕಾಯಿಲೆಗೆ ಪ್ರತಿರೋಧಕ ಶಕ್ತಿ ಬರುತ್ತದೆ? ಇವೇ ಮೊದಲಾದ ವಿಚಾರಗಳ ಬಗ್ಗೆ ಸಂಶೋಧನೆಗಳು ಶುರುವಾಗಿವೆ. ಭಾರತೀಯರಿಗೆ ಇದೆಲ್ಲ ಮೊದಲೇ ತಿಳಿದಿತ್ತು.
ಕೋಲ್ಡ್‌ನಿಂದ ಕ್ಯಾನ್ಸರ್‌ವರೆಗೆ ಆಹಾರದಲ್ಲೇ ಮದ್ದುಂಟು. ದಿನಕ್ಕೊಂದು ಗೆಜ್ಜರಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯನ್ನು ಶೇ 86ರಷ್ಟು ಕಡಿಮೆ ಮಾಡಬಲ್ಲದು. ಬೆಳ್ಳುಳ್ಳಿ, ಈರುಳ್ಳಿಗಳು ಶೀತ, ಕ್ಯಾನ್ಸರ್ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಬಲ್ಲವು. ಶುಂಠಿ ತಲೆನೋವು, ರಕ್ತ ಹೆಪ್ಪುಗಟ್ಟುವುದನ್ನು ತಪ್ಪಿಸಬಲ್ಲದು. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.
ಮುಂದಿನ ಸಂಚಿಕೆಗಳಲ್ಲಿ ಆಹಾರ ಮತ್ತು ಆರೋಗ್ಯದ ಕುರಿತು ಇನ್ನಷ್ಟು ಆಳವಾಗಿ ಚರ್ಚಿಸೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com