ಆ ಗೆರೆಯನ್ನು ಯಾರೂ ಹಾಗೆ ಎಳೆದು ಹೋಗಿರುವುದಿಲ್ಲ. ಅದನ್ನು ದಾಟಿ ಹೋದರೆ ಅಪಾಯ ಎಂಬ ಎಚ್ಚರಿಕೆಯನ್ನು ಕೊಡಲು ಇಲ್ಲಿ ಲಕ್ಷ್ಮಣನೂ ಇಲ್ಲ. ಏಕೆಂದರೆ ಇದು ಆಧುನಿಕ ಯುಗ. ಕಣ್ಣಿಗೆ ಕಾಣದ ಅದೆಷ್ಟೋ ಗೆರೆಗಳು ನಮ್ಮ ಸುತ್ತಮುತ್ತಲೂ ಹರವಿಕೊಂಡಿರುತ್ತವೆ. ಜೀವನ ಸಂಕೀರ್ಣವಾಗುತ್ತ ಹೋದಂತೆಲ್ಲಾ ಗೆರೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಅದೇನು ಬೆಂಕಿಯಿಂದ ಜ್ವಲಿಸುತ್ತಿರುವುದಿಲ್ಲ. ಭೌತಿಕವಾಗಿ ಸುಡುವುದೂ ಇಲ್ಲವೆನ್ನಿ. ಕೊನೇ ಪಕ್ಷ ಕಣ್ಣಿಗೆ ಗೋಚರವೂ ಅಲ್ಲ. ಆದರೂ ಅದೊಂದು ರೀತಿಯಲ್ಲಿ ಲಕ್ಷ್ಮಣರೇಖೆಯೇ. ಅದನ್ನು ದಾಟಿದರೆ ಅಪಾಯ ಖಂಡಿತಾ ಎದಿರಸಲೇಬೇಕಿರುತ್ತದೆ. ನಮ್ಮ ಸುತ್ತಲಿನ ಸಮಾಜ, ಅದರ ರೀತಿ ರಿವಾಜುಗಳು, ನಮ್ಮ ನಡುವೆಯೇ ಓಡಾಡುತ್ತಿರುವ ಬಂಧಗಳು, ಕುಟುಂಬ ವರ್ಗ, ಸ್ನೇಹಿತರು, ನಾವು ಕಟ್ಟು ಬಿದ್ದ ನಂಬಿಕೆಗಳು, ನಮ್ಮ ಸಿದ್ಧಾಂತ ಇವೆಲ್ಲವೂ ಒಂದು ರೀತಿಯಲ್ಲಿ ನಮಗೆ ಲಕ್ಷ್ಮಣರೇಖೆಗಳೇ. ಇವೆಲ್ಲವೂ ನಮ್ಮ ಸ್ವೇಚ್ಛೆಯನ್ನು ನಿಯಂತ್ರಿಸುತ್ತಲೇ ಇರುತ್ತವೆ. ಹಾಗೆಂದು ಇದು ನಮ್ಮ ಸ್ವಾತಂತ್ರ್ಯಹರಣ ಎಂದೇನೂ ಅಲ್ಲ. ಹೇಗೆ ಇಡೀ ರಾಮಾಯಣ ನಿಂತಿರುವುದು ಲಕ್ಷ್ಮಣರೇಖೆಯ ಘಟನೆಯಿಂದಲೋ ಹಾಗೆಯೇ ನಮ್ಮ ಬದುಕು ಸಹ. ಬದುಕಿಗೆ ಮಹತ್ವದ ತಿರುವುದಗಳು ಬರುವುದೇ ನಮ್ಮ ಗೆರೆಯನ್ನು ನಾವು ದಾಟಿ ಹೊರಟಾಗ. ನಮ್ಮ ಮನದಂಗಳದಲ್ಲಿ ಎಲ್ಲೆಯನ್ನು ಮೀರದ ಎಚ್ಚರಿಕೆ ಕೇಳಿಸುತ್ತಲೇ ಇರುತ್ತದೆ. ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿರುವುದೇ ಇಲ್ಲ. ಕೆಲವೊಮ್ಮೆ ಅತಿಭಾವುಕತೆಗೆ ಬಿದ್ದು, ಇನ್ನು ಕೆಲವೊಮ್ಮೆ ಭಂಡತನದಲ್ಲಿ, ಮತ್ತೆ ಕೆಲಬಾರಿ ಮುಗ್ಧತೆ, ಮೂರ್ಖತನ ಹೀಗೆ ಒಂದಿಲ್ಲೊಂದು ಕಾರಣಕ್ಕೆ ನಾವು ಗೆರೆ ದಾಟಿ ಹೊರಟುಬಿಡುತ್ತೇವೆ. ಅದನ್ನು ಮಂತ್ರ ಶಕ್ತಿಯಿಂದ, ಯಾರದೋ ಒತ್ತಾಯದಿಂದ, ಇನ್ಯಾವುದೋ ಬಲವಂತಕ್ಕೆ ಬಿದ್ದು ತಡೆಯಲು ಆಗುವುದೇ ಇಲ್ಲ. ಅದು ನಮ್ಮೊಳಗಿನ ಪ್ರಜ್ಞೆ ಆಗಬೇಕು. ಯಾವುದೇ ಕಾರಣಕ್ಕೆ ನಮ್ಮ ಗೆರೆಯನ್ನು ನಾವು ಸಮೀಪಿಸಲೇಬಾರದೆಂಬ ನಿರ್ಧಾರ ನಮ್ಮೊಳಗೆ ಮೊಳೆಯಬೇಕು. ಹೊಸ್ತಿಲಿನಿಂದಾಚೆಯ ಬದುಕಿನ ಕುತೂಹಲ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಸುಪ್ತವಾಗಿರುವ ಇಂಥ ಚಾಂಚಲ್ಯವನ್ನು ಹತ್ತಿಕ್ಕಿಕೊಳ್ಳುವುದು ಸಂಯಮ ಎನಿಸುತ್ತದೆ. ಒಮ್ಮೆ ಅದನ್ನು ದಾಟಿದರೆ ಮುಂದಿನ ಎಲ್ಲ ಬೆಳವಣಿಗೆಗಳಿಗೂ ನಾವೇ ಹೊಣೆಗಾರರಾಗಬೇಕಾಗುತ್ತದೆ. ಗೆರೆಯಾಚೆಯೂ ದಿಟ್ಟವಾಗಿ ನಾವಾಗಿಯೇ ನಿಲ್ಲುವ ದೃಢತೆ ಇದ್ದರೆ ಸ್ವತಂತ್ರ ಹಾರಾಟ ತಪ್ಪಲ್ಲ.
-ಸಹನೆ