

ಐನೂರು ರುಪಾಯಿ ಬೆಲೆಯ ಎಲೆಕ್ಟ್ರಾನಿಕ್ಸ್ ಐಟಂ ಬೇಕಾದರೂ ಊರಿನಲ್ಲಿರುವ ತಮ್ಮ, ಬೆಂಗಳೂರಿನಲ್ಲಿರುವ ಅಣ್ಣನಿಗೆ ಫೋನ್ ಹಚ್ಚುತ್ತಾನೆ. ಅಣ್ಣ, ನಾಲ್ಕಾರು ಆನ್ಲೈನ್ ಅಂಗಡಿಗಳ ವೆಬ್ಸೈಟುಗಳಲ್ಲಿ ಅದರ ಬೆಲೆಯನ್ನು ಜಾಲಾಡಿ, ಸೂಕ್ತವೆಂದು ಕಾಣಿಸಿದ್ದಕ್ಕೆ ಆರ್ಡರ್ ಮಾಡುತ್ತಾನೆ. ಮರುದಿನ ಅದು ಮನೆ ಬಾಗಿಲಲ್ಲಿರುತ್ತದೆ.
ಇದು ಐಟಿ ರಾಜ್ಯ ಕರ್ನಾಟಕದ ರಾಜಧಾನಿಯ ಎಲೆಕ್ಟ್ರಾನಿಕ್ಸ್ ಉಪಕರಣ ಖರೀದಿ ಛಾಪು. ದೇಶದ ಇ-ಮಾರ್ಕೆಟಿಂಗ್ನಲ್ಲಿ ಬೆಂಗಳೂರು ಹಾಗೂ ಕರ್ನಾಟಕದ ಜನತೆಯ ಗುರುತು ಅಧಿಕ. ಅದರಲ್ಲೂ ಆನ್ಲೈನ್ ಗ್ರಾಹಕರು ತಮ್ಮ ಖರೀದಿಯಲ್ಲಿ ಶೇ.60ಕ್ಕೂ ಅಧಿಕ ಭಾಗವನ್ನು ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಮೀಸಲಿಟ್ಟಿದ್ದಾರಂತೆ. ಇದು ಈಬೇ ಸಂಸ್ಥೆಯ ಸಮೀಕ್ಷೆಯ ಫಲಿತಾಂಶ.
ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳು ಸಾಂಪ್ರದಾಯಿಕ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿವೆ. ಆದರೆ ಕರ್ನಾಟಕ ಐಟಿ ಮೇಲಿನ ಪ್ರೇಮವನ್ನು ಆನ್ಲೈನ್ ಮಾರ್ಕೆಟಿಂಗ್ನಲ್ಲೂ ಬಿಟ್ಟಿಲ್ಲ.
ಭಾರತದಲ್ಲಿ ಸುಮಾರು 4,306 ಇ-ಕಾಮರ್ಸ್ ಕೇಂದ್ರಗಳಿದ್ದು, ಹಿಂದಿನ ವರ್ಷದ ಇ-ವ್ಯವಹಾರಕ್ಕೆ ಹೋಲಿಸಿದರೆ ಶೇ.30ರಷ್ಟು ವೃದ್ಧಿಯಾಗಿದೆ. ಮತ್ತೊಂದು ವೈಶಿಷ್ಟ್ಯವೆಂದರೆ ಗ್ರಾಮೀಣ ಭಾರತವೂ ಆನ್ಲೈನ್ ಮಾರ್ಕೆಟಿಂಗ್ ಬಗ್ಗೆ ಆಸಕ್ತಿಹೊಂದಿದೆ. ಸುಮಾರು 1015 ಗ್ರಾಮೀಣ ಪ್ರದೇಶಗಳ ಗ್ರಾಹಕರು ವ್ಯವಹಾರ ನಡೆಸಿದ್ದು, ಅವರ ಪ್ರಮುಖ ಆಯ್ಕೆಯೂ ಎಲೆಕ್ಟ್ರಾನಿಕ್ ಉಪ ಕರಣಗಳಾಗಿವೆ.
ರಾಜ್ಯದ ಕರಕುಶಲಕ್ಕೆ ಬೇಡಿಕೆಯಿದೆ, ಮಾರುಕಟ್ಟೆಯಿಲ್ಲ
ಮೊದಲಿನಿಂದಲೂ ಗ್ರಾಮೀಣ ಕರ್ನಾಟಕವು ಕರಕುಶಲ ಉತ್ಪನ್ನಗಳಿಗೆ ಪ್ರಖ್ಯಾತವಾಗಿದೆ. ಆದರೆ ಸೂಕ್ತ ಮಾರುಕಟ್ಟೆಯಿಲ್ಲದೇ ನಶಿಸುತ್ತಿದೆ. ರಾಜಸ್ಥಾನ, ಕೇರಳ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದ ಕರಕುಶಲ ಉತ್ಪನ್ನಗಳಿಗೆ ಆನ್ಲೈನ್ ಮಾರುಕಟ್ಟೆಯ ಪರಿಚಯವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಿದೆ. ಕುಸುರಿ ರೇಷ್ಮೆ ಸೀರೆ ಹೊರತಾಗಿ ಬೇರೆ ಉತ್ಪನ್ನಗಳ ಲಭ್ಯತೆಯಿಲ್ಲ. ಈಬೇ ಸಂಸ್ಥೆಯ ಮೂಲಗಳೇ ಹೇಳಿರುವಂತೆ ರಾಜ್ಯದಲ್ಲಿನ ಕರಕುಶಲ ಹಾಗೂ ಪಾರಂಪರಿಕ ವಸ್ತುಗಳ ಮಾರುಕಟ್ಟೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಜೈಪುರದ ಮಾದರಿಯನ್ನು ರಾಜ್ಯ ಅನುಸರಿಸಬೇಕಿದೆ.
ಕರ್ನಾಟಕ
ಟಾಪ್ ಇ-ಕಾಮರ್ಸ್ ಕೇಂದ್ರ ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಉಡುಪಿ
ಟಾಪ್ ಗ್ರಾಮೀಣ ಕೇಂದ್ರ ಗದಗ, ಹೂವಿನಹಡಗಲಿ, ತೀರ್ಥಹಳ್ಳಿ, ಸೋಮವಾರಪೇಟೆ, ಶಹಾಪುರ
ಟಾಪ್ ರಫ್ತು ಕೇಂದ್ರ ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ, ಕುಂದಗೋಳ
ಟಾಪ್ 5 ವ್ಯಾಪಾರ ಎಕ್ಸ್ಟರ್ನಲ್ ಡ್ರೈವ್, ರೇಷ್ಮೆ ಸೀರೆ, ಕಾರಿನ ಸುಗಂಧ ದ್ರವ್ಯ, ವೆಸ್ಟ್, ಲ್ಯಾಪ್ಟಾಪ್ ಬ್ಯಾಗ್
ಸಮೀಕ್ಷೆಯ ಪ್ರಮುಖ ಅಂಶಗಳು
ಇ-ಕಾಮರ್ಸ್ನ ಅಗ್ರ ನಗರಗಳು-
ದೆಹಲಿ, ಮುಂಬೈ, ಜೈಪುರ, ಬೆಂಗಳೂರು, ಚೆನ್ನೈ
ಅಗ್ರ ರಾಜ್ಯಗಳು-
ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ತಮಿಳುನಾಡು, ಕರ್ನಾಟಕ
ಉತ್ತಮ ಗ್ರಾಮೀಣ ಕೇಂದ್ರಗಳು-
ಗುಂಟೂರು(ಆಂಧ್ರ), ಚೋರ್ಯಾಸಿ(ಗುಜರಾತ್), ಕಾರ್ತಿಕಪಲ್ಲಿ(ಕೇರಳ), ವಿಲ್ಲುಪುರಂ(ತಮಿಳುನಾಡು), ದಿಂಡೋರಿ(ಮಹಾರಾಷ್ಟ್ರ)
ಟಾಪ್ 10 ಬ್ರಾಂಡ್ಗಳು-
ಸ್ಯಾಮ್ಸಂಗ್, ಆ್ಯಪಲ್, ಸೋನಿ, ನೋಕಿಯಾ, ಸ್ಯಾಂಡ್ಡಿಸ್ಕ್, ಬ್ಲ್ಯಾಕ್ಬೆರ್ರಿ, ಕ್ಯಾನಾನ್, ಟ್ರಾನ್ಸೆಂಡ್, ಮೈಕ್ರೋಮ್ಯಾಕ್ಸ್, ನಿಕಾನ್
ಟಾಪ್ 5 ವ್ಯಾಪಾರ-
ಲ್ಯಾಪ್ಟಾಪ್ ಉಪಕರಣ, ವ್ಯಾಲೆಟ್, ಟ್ಯಾಬ್ಲೆಟ್, ವಾಚ್, ಮೋಡೆಮ್
ಗ್ರಾಮೀಣ ಭಾರತದ ಟಾಪ್ 5 ವಸ್ತುಗಳು- ಮೊಬೈಲ್ ಫೋನ್ ಕವರ್, ರಿಪಬ್ಲಿಕ್ ಆಫ್ ಇಂಡಿಯಾ ನೋಟ್ಸ್, ಮೋಡೆಮ್, ಬ್ಲೂಟೂತ್ ಹೆಡ್ಸೆಟ್, ಟ್ಯಾಬ್ಲೆಟ್
-ರಾಜೀವ ಹೆಗಡೆ