ಪದಾರ್ಥದ ರುಚಿಯು ನಾಲಿಗೆಯಿಂದ ತಿಳಿಯುತ್ತದೆ. ನಾಲಿಗೆಯ ಮೇಲ್ಭಾಗವು ಒರಟಾಗಿದೆ. ಈ ಭಾಗದಲ್ಲಿ ರುಚಿಯ ಪ್ರಚೋದನೆಗಳನ್ನು ಗ್ರಹಿಸಬಲ್ಲ ಸೂಕ್ಷ್ಮವಾದ ಕೋಶಗಳ ಸಮೂಹವಿದೆ. ಇವುಗಳಿಗೆ ರಸಾಂಕುರಗಳೆಂದು (ಟೇಸ್ಟ್ ಬಡ್ಸ್) ಹೆಸರು. ಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಂಡಾಗ, ನಾಲಿಗೆಯ ತುದಿಯಲ್ಲಿರುವ ರಸಾಂಕುರಗಳು ಉತ್ತೇಜಿತವಾಗುವವು. ಈ ಪ್ರಚೋದನೆಗಳು ಜ್ಞಾನವಾಹಿನಿ ನರಗಳ ಮೂಲಕ ಮಿದುಳನ್ನು ಸೇರುವವು. ಆಗ ಸಕ್ಕರೆಯು ಸಿಹಿ ಎಂಬ ಅರಿವು ಉಂಟಾಗುವುದು. ಪದಾರ್ಥವು ಸಿಹಿಯಾಗಿದ್ದರೆ ಮಾತ್ರ ನಾಲಿಗೆಯ ತುದಿಯಲ್ಲಿ ಇರುವ ರಸಾಂಕುರಗಳು ಉತ್ತೇಜನಗೊಳ್ಳುವವು.
ಮಳೆಗಾಲಕ್ಕಿಂತ ಚಳಿಗಾಲದಲ್ಲಿ ಒದ್ದೆಬಟ್ಟೆಗಳು ಬೇಗ ಒಣಗುತ್ತವೆ ಏಕೆ?
ಮಳೆಗಾಲದಲ್ಲಿ ವಾಯುವಿನಲ್ಲಿನ ಆರ್ದ್ರತೆಯ ಪ್ರಮಾಣ ಹೆಚ್ಚು ಇರುತ್ತದೆ. ಚಳಿಗಾಲದಲ್ಲಿ ವಾಯು ಒಣದಾಗಿರುತ್ತದೆ. ವಾಯುವಿನಲ್ಲಿಯ ಬಾಷ್ಪದ ಪ್ರಮಾಣವು ಕಡಿಮೆಯಾದಂತೆ ಆರುವಿಕೆಯ ವೇಗವು ಹೆಚ್ಚಾಗುತ್ತದೆ. ಆದುದರಿಂದ ಮಳೆಗಾಲಕ್ಕಿಂತ ಚಳಿಗಾಲದಲ್ಲಿ ಬಟ್ಟೆಗಳು ಬೇಗನೆ ಒಣಗುತ್ತವೆ.