ಮಲೆನಾಡಿನ ಒಂದು ಹಳ್ಳಿಯಲ್ಲಿ ರಂಗ ಎಂಬ ಯುವಕನಿದ್ದ. ಒಂದು ದಿನ ಹೊಳೆಯ ದಂಡೆಯ ಮೇಲೆ ಬೆಳೆದ ಮರವನ್ನು ಆತ ಹತ್ತಿ ದೊಡ್ಡ ಟೊಂಗೆಯೊಂದನ್ನು ಕಡಿಯತೊಡಗಿದ. ಇನ್ನೇನು ಟೊಂಗೆ ಮುರಿದುಬೀಳಲು ಸ್ವಲ್ಪ ಭಾಗ ಮಾತ್ರ ಉಳಿದಿತ್ತು. ಅದು ತುಂಡಾಗಿ ಹೊಳೆಯಲ್ಲಿ ಬೀಳುವುದರಲ್ಲಿತ್ತು. ಅಷ್ಟರಲ್ಲಿ ಆ ಮರದ ಹತ್ತಿರ ಚಿರತೆಯೊಂದು ಬಂತು. ಅದಕ್ಕೆ ತುಂಬಾ ಹಸಿವಾಗಿತ್ತು. ರಂಗನನ್ನು ನೋಡಿ ಅದರ ಬಾಯಲ್ಲಿ ನೀರೂರಿತು. ಮರವನ್ನು ಹತ್ತತೊಡಗಿತು. ರಂಗನಿಗೆ ಪ್ರಾಣಸಂಕಟ. ಇತ್ತ ಚಿರತೆ, ಅತ್ತ ಕೆಳಗೆ ತುಂಬಿ ಹರಿಯುವ ಹೊಳೆ. ಅವನಿಗೆ ಈಜು ಬಾರದು. ರಂಗ ಬುದ್ಧಿ ಓಡಿಸಿದ. ಮರದ ಟೊಂಗೆ ಹೊಳೆಯಲ್ಲಿ ತೇಲುವುದು. ಅದು ತನ್ನ ಪ್ರಾಣ ಉಳಿಸೀತು. ಟೊಂಗೆಯನ್ನು ಕಡಿದು ಅದನ್ನೇ ಅಪ್ಪಿಕೊಂಡು ಹೊಳೆಯಲ್ಲಿ ತೋಲಿಹೋಗಿ ಚಿರತೆಯ ಬಾಯಿಂದ ತಪ್ಪಿಸಿಕೊಳ್ಳಬಹುದು ಎಂದು ಆಲೋಚಿಸಿದ.
ಚಿರತೆ ತೀರ ಸಮೀಪಕ್ಕೆ ಬಂದಿತ್ತು. ಒಂದೇ ಏಟಿಗೆ ಟೊಂಗೆಯನ್ನು ಕೊಡಲಿಯಿಂದ ಕಡಿದ. ದೊಡ್ಡ ಟೊಂಗೆ ಸಪ್ಪಳ ಮಾಡುತ್ತ ಹೊಳೆಯಲ್ಲಿ ಬಿತ್ತು. ರಂಗ ಟೊಂಗೆಯನ್ನು ಅಪ್ಪಿಕೊಂಡೇ ಇದ್ದ. ಅದು ಅವನನ್ನು ತೇಲಿಸಿಕೊಂಡು ದೂರ ಹೋಯಿತು. ಚಿರತೆಯಿಂದ ಪಾರುಮಾಡಿತು. ಈಜು ಬಾರದ ಅವನನ್ನು ಮುಳುಗಿ ಸಾಯುವುದರಿಂದ ತಪ್ಪಿಸಿತು.
ರಂಗ ದಡ ಸೇರಿದ. ಎರಡು ಆಪತ್ತುಗಳಿಂದ ಪಾರುಮಾಡಿದ ಮರದ ಟೊಂಗೆಗೆ ಕೃತಜ್ಞತೆ ಸಲ್ಲಿಸಿದ. ಮರವೇ ಅವನ ಪ್ರಾಣ ಉಳಿಸಿತು. ಅಂದಿನಿಂದ ರಂಗ ಗಿಡಮರ ಕಡಿಯುವುದನ್ನು ಬಿಟ್ಟುಬಿಟ್ಟ. ಬದಲಾಗಿ ಗಿಡಮರಗಳನ್ನು ಸ್ನೇಹಿತರಂತೆ ಪ್ರೀತಿಸತೊಡಗಿದ. ಈಗಾಗಲೇ ತಾನು ಕಡಿದ ಗಿಡಮರಗಳ ಸ್ಥಳದಲ್ಲಿ ಹೊಸ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿದ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ