

ನಮ್ಮ ಮುಖಭಾವಗಳನ್ನು ನಿಯಂತ್ರಿಸುವ ನರ ನಿಸ್ತೇಜವಾದಾಗ ಉಂಟಾಗುವ ತೊಂದರೆಯೇ ಬೆಲ್ಸ್ ಪಾಲ್ಸಿ. ಇದರ ಬಗ್ಗೆ ಬಿಜಿಎಸ್ ಆಸ್ಪತ್ರೆಯ ಖ್ಯಾತ ನರತಜ್ಞ ಡಾ. ವೆಂಕಟರಮಣ ಇಲ್ಲಿ ವಿವರಿಸಿದ್ದಾರೆ.
ಮುಖದಲ್ಲಿ ನವರಸಗಳು ತುಂಬಿ ಹೊಮ್ಮಬೇಕಾದರೆ ಕಣ್ಣು ಹುಬ್ಬು, ರೆಪ್ಪೆ, ತುಟಿ, ಮೂಗುಗಳೆಲ್ಲ ಸಹಕರಿಸಬೇಕು. ಒಂದು ದಿನ ಬೆಳಗ್ಗೆ ಎದ್ದು ಕನ್ನಡಿ ಎದುರು ನಿಂತಾಗ ಸೊಟ್ಟಗಾದ ಬಾಯಿ, ಮುಚ್ಚಲಾಗದ ಕಣ್ಣು, ಬಾತುಕೊಂಡ ಕಪೋಲ ಕಂಡು ಹೌಹಾರುತ್ತೀರಿ.
ಏನಾಯಿತು?
ಅದೇ ಬೆಲ್ಸ್ ಪಾಲ್ಸಿ, ಅಥವಾ ಫೇಶಿಯಲ್ ಪಾಲ್ಸಿ. ನಮ್ಮ ಮುಖಭಾವಗಳೆಲ್ಲವನ್ನೂ ನಿಯಂತ್ರಿಸುವ ನರವೊಂದು ನಿಸ್ತೇಜವಾದಾಗ ಉಂಟಾಗುವ ತೊಂದರೆಯಿದು. ಆ ನರದ ಹೆಸರೇ ಕ್ರೇನಿಯಲ್ ನರ್ವ್.
ತಪ್ಪು ತಿಳೀಬೇಡಿ!
ಸಾಮಾನ್ಯವಾಗಿ ಇದನ್ನು ಜನ ಲಕ್ವ ಎಂದು ತಪ್ಪಾಗಿ ತಿಳಿಯುತ್ತಾರೆ. ಆದರೆ ಇದು ಸ್ಟ್ರೋಕ್ ಅಲ್ಲ. ನರಸಂಬಂಧಿತ ಕಾಯಿಲೆ. ಏನಾಗಿದೆ ಎಂದು ಊಹಿಸಲೂ ಸಮಯ ನೀಡದಂತೆ ದಿಢೀರನೆ ಕಾಣುವ ಲಕ್ಷಣಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ, ತೆರೆದ ಕಣ್ಣು ಮುಚ್ಚಲಾಗದೆ, ತುಟಿಯೆರಡನ್ನು ಸೇರಿಸಲಾಗದೆ, ಸೊಟ್ಟಗಾದ ಕೆನ್ನೆ ತುಟಿಯ ಭಾಗ, ಮೇಲೇರಿ ಇಳಿಯಲಾಗದ ಹುಬ್ಬುಗಳನ್ನು ಕಂಡು ಹೌಹಾರುವಿರಿ.
ಹೇಗೆ ಗೊತ್ತಾಗುತ್ತೆ?
ಕಿವಿಯಲ್ಲಿ ಮತ್ತು ಹಿಂದೆ ನೋವು, ಕೆನ್ನೆಯ ಭಾಗದಲ್ಲಿ ಚುಮುಚುಮು, ತಲೆನೋವು, ಗಂಟಲು ಕೆರೆತ, ತಲೆಸುತ್ತು, ಮುಖದ ಭಾಗ ಮರಗಟ್ಟುವುದು. ಎಲ್ಲರಲ್ಲೂ ಎಲ್ಲ ಲಕ್ಷಣಗಳೂ ಇರಬೇಕೆಂದಿಲ್ಲ.
ಏನು ಚಿಕಿತ್ಸೆ?
ಕಣ್ಣಿಗೆ ಕಾಣುವ ಲಕ್ಷಣಗಳಿಂದಲೇ ರೋಗವನ್ನು ಗುರುತಿಸಬಹುದು. ಸೋಂಕು ಎಲ್ಲಿ ಮತ್ತು ಯಾಕೆ ಆಗಿದೆ ಎಂದು ಪರೀಕ್ಷಿಸುತ್ತಾರೆ. ಬ್ಯಾಕ್ಟೀರಿಯಾ ಸೋಂಕು ಆಗಿದ್ದರೆ ಆ್ಯಂಟಿಬಯಾಟಿಕ್, ವೈರಲ್ ಸೋಂಕು ಆಗಿದ್ದರೆ ಸ್ಟಿರಾಯ್ಡ್ ಕೊಡುತ್ತಾರೆ. ಆದರೆ ನರಕ್ಕೆ ಆಗಿರುವ ನಷ್ಟದ ಪ್ರಮಾಣ ಅರಿಯಲು, ಮೆದುಳಿನ ಭಾಗದಲ್ಲಿ ಗಡ್ಡೆ ಇದೆಯೇ ಎಂದು ತಿಳಿಯಲು ಸಿಟಿ ಅಥವಾ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಬೇಕಾಗುತ್ತದೆ. ವಾಸಿಯಾಗಲು 3-4 ವಾರ ಬೇಕು.
ಸರಿಹೋಗುತ್ತೆ ಬಿಡಿ
ಕೂಡಲೇ ವೈದ್ಯರ ಬಳಿ ಧಾವಿಸಿ ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ಈ ಸಮಸ್ಯೆ ಮೂರು ನಾಲ್ಕು ವಾರಗಳಲ್ಲಿ ಸರಿಹೋಗುತ್ತದೆ. ಆದರೆ ನನ್ನ ಮುಖ ಸರಿಹೋಗುತ್ತದಾ ಇಲ್ಲವಾ ಎಂಬ ಚಿಂತೆಯಿಂದ ಅನೇಕರು ಡಿಪ್ರೆಶನ್‌ಗೆ ಒಳಗಾಗುವುದುಂಟು.
ಶಸ್ತ್ರಚಿಕಿತ್ಸೆ
ಒಮ್ಮೊಮ್ಮೆ ಫೇಶಿಯಲ್ ಕೆನಾಲ್‌ನಲ್ಲಿ ನರ ಸಿಕ್ಕಿಕೊಂಡಿದ್ದರೆ, ಕಿವಿಯ ಹಿಂದೆ ಸಣ್ಣ ಸರ್ಜರಿ ಮಾಡಿ ನರವನ್ನು ಬಿಡಿಸಲಾಗುವುದು. ಸೋಂಕು ತೀವ್ರತರವಾಗಿದ್ದಲ್ಲಿ ಕಿವಿಯ ಹಿಂಭಾಗಕ್ಕೆ ತೊಡೆಯ ನರ್ವ್ ಗ್ರಾಫ್ಟಿಂಗ್ ಮಾಡಲಾಗುತ್ತದೆ. ಇದಾವುದರಿಂದಲೂ ವಾಸಿಯಾಗದಿದ್ದಲ್ಲಿ ನಾಲಿಗೆಯ ಒಂದು ಭಾಗದ ನರ ತೆಗೆದು ಗ್ರಾಫ್ಟಿಂಗ್ ಮಾಡಬೇಕಾಗುತ್ತದೆ. ಅಪರೂಪಕ್ಕೊಮ್ಮೆ, ಮುಖದ ಎರಡೂ ಕಡೆ ಪಾಲ್ಸಿ ಆಗುವುದುಂಟು.
ಪಾಲ್ಸಿಯ ಪಾಲಿಸಿ
ಕ್ರೇನಿಯಲ್ ನರ ಹರಿವೆಡೆಯಲ್ಲಿ ಎಲ್ಲೇ ಸೋಂಕುಂಟಾದರೂ ಈ ರೋಗ ಉಂಟಾಗುತ್ತದೆ. ಮುಖ್ಯವಾಗಿ ಕಿವಿಯ ಒಳಗೆ ಸೋಂಕುಂಟಾಗಿದ್ದರೆ, ಹರ್ಪಿಸ್ ಥರದ ಚರ್ಮರೋಗ ಬಾಧಿಸಿದರೆ ಆಗ ಇದು ತಲೆದೋರುತ್ತದೆ. ಪೀಟ್ರಿಸ್ ಬೋನ್ ಬಳಿ ಟ್ಯೂಮರ್, ವೈರಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕು, ಯಾವುದೇ ರೀತಿಯ ಪೆಟ್ಟು, ಗಾಯ ಆಗಿದ್ದಲ್ಲಿ ಸಹ ಇದು ಉಂಟಾಗಬಹುದು. ಜೊಲ್ಲು ಗ್ರಂಥಿಗಳ ಹೊರಗೆ, ಪೆರೋಟಿಡ್ ಗ್ಲಾಂಡ್ಸ್ ಬಳಿ ಕ್ರೇನಿಯಲ್ ನರ ಹರಿದಿರುತ್ತದೆ. ಇಲ್ಲಿ ಸೋಂಕುಂಟಾದರೆ ಸಹ ಆಗಬಹುದು. ಇದಲ್ಲದೆ, ಮೆದುಳಿನ ಸಿ.ಪಿ.ಆ್ಯಂಗಲ್ ಬಳಿ ಟ್ಯೂಮರ್ ಇದ್ದಲ್ಲಿ ಬೆಲ್ಸ್ ಪಾಲ್ಸಿ ಉಂಟಾಗಬಹುದು. ಇದನ್ನು ತಿಳಿಯಲು ಸ್ಕ್ಯಾನಿಂಗ್ ಅಗತ್ಯ.
ಎಚ್ಚರಿಕೆಗಳು
ಕಣ್ಣನ್ನು ಮುಚ್ಚಲಾಗುವುದಿಲ್ಲವಾದ್ದರಿಂದ ಈ ಸಮಯದಲ್ಲಿ ಧೂಳು ಹೋಗದಂತಿರಲು ಸದಾ ಕನ್ನಡಕ ಧರಿಸಿರಬೇಕು. ಕಣ್ಣೀರು ಸೃಷ್ಟಿಯಾಗುವಂತೆ ಕೃತಕ ಡ್ರಾಪ್ಸ್ ಹಾಕಿಕೊಳ್ಳಬೇಕು. ವೈದ್ಯರು ಹೇಳಿಕೊಟ್ಟ ಮುಖದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಗದ್ದಲದಿಂದ ದೂರವಿರಬೇಕಾಗಬಹುದು. ಈ ರೋಗ ಸಾಮಾನ್ಯವಾಗಿ ವೈರಸ್‌ನಿಂದ ಉಂಟಾಗುವುದರಿಂದ, ತಣ್ಣೀರು ಸ್ನಾನ ಬೇಡ. ತಣ್ಣಗಾದ ಪದಾರ್ಥ ವರ್ಜ್ಯ. ಎಸಿ ಕೆಳಗೆ ಹೆಚ್ಚು ಹೊತ್ತು ಕಳೆಯಬೇಡಿ.
ಕ್ರೇನಿಯಲ್ ನರದ ಸೋಂಕು
ಕ್ರೇನಿಯಲ್ ಅಥವಾ ಫೇಶಿಯಲ್ ನರ ಮೆದುಳಿನಿಂದ ಹೊರಟು, ಕಿವಿಯ ಹಿಂದಿನ ಇಂಟರ್ನಲ್ ಅಕೋಸ್ಟಿಕ್‌ಮಿಯಾಟೀಸ್ ಎನ್ನುವ ಮೂಳೆಯೊಳಗೆ ಸೇರಿ ಹರಿದು, ಮುಖದ ಭಾಗದಲ್ಲಿ ಸಂಪೂರ್ಣವಾಗಿ ಹರಡಿಕೊಳ್ಳುತ್ತದೆ. ಕಣ್ಣು, ರೆಪ್ಪೆ, ಕೆನ್ನೆ, ಗಲ್ಲ, ಮೂಗು, ಹುಬ್ಬು, ತುಟಿ, ಕತ್ತು ಎಲ್ಲವುಗಳ ಚಲನೆಯನ್ನೂ ನಿಯಂತ್ರಿಸುತ್ತದೆ. ಮುಖಭಾವವನ್ನು ಹೊರಹೊಮ್ಮಿಸುವಲ್ಲಿ ಪ್ರಮುಖ ಪಾತ್ರ ಈ ನರದ್ದೇ. ಈ ನರಕ್ಕೆ ಸೋಂಕು ಉಂಟಾದಾಗ ಬೆಲ್ಸ್ ಪಾಲ್ಸಿ ಉಂಟಾಗುತ್ತದೆ ಎಂದು ವಿವರಿಸುತ್ತಾರೆ ಹೆಸರಾಂತ ನ್ಯೂರೋಸರ್ಜನ್, ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಉಪ ಚೇರ್‌ಮನ್ ಹಾಗೂ ಗ್ಲೋಬಲ್ ನ್ಯೂರೋ ಆಂಡ್ ಸ್ಪೈನ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕ ಡಾ.ವೆಂಕಟರಮಣ ಎನ್.ಕೆ. ಹೆಚ್ಚಿನ ವಿವರಕ್ಕೆ: 9900376666
ನಿರೂಪಣೆ: ಗೀತಾ ಶ್ರೀನಿವಾಸನ್