ನನ್ನ ಬಾಲ್ಯದ ಗೆಳೆಯರೊಬ್ಬರು ಹೃದ್ರೋಗ ತಜ್ಞರು. ಬೆಂಗಳೂರಿನಲ್ಲೇ ಸ್ವಂತ ಆಸ್ಪತ್ರೆ ಇದೆ. ಸಾಮಾನ್ಯವಾಗಿ ತಿಂಗಳಿಗೊಮ್ಮೆಯಾದರೂ ನಮ್ಮ ಭೇಟಿ. ಒಂದಷ್ಟು ಹರಟೆ, ಕ್ಷೇಮ ಸಮಾಚಾರ ವಿನಿಮಯ. ನಾಲ್ಕೈದು ತಿಂಗಳುಗಳಿಂದ ಆಸಾಮಿ ಪತ್ತೆಯೇ ಇಲ್ಲ. ವಿದೇಶಕ್ಕೆ ಹೋಗುವುದಿದ್ದರೆ ಹೇಳುತ್ತಿದ್ದ. ಮೊನ್ನೆ ಸಿಕ್ಕ. ಸುಮ್ಮನೆ ರೇಗಿಸಲು, 'ದೊಡ್ಡ ವೈದ್ಯನಾದ ಮೇಲೆ ನಮ್ಮ ನೆನಪೆಲ್ಲಾ ಎಲ್ಲಿರಬೇಕು' ಎಂದು ರೇಗಿಸಿದೆ. 'ಅಯ್ಯೋ ಸುಮ್ನಿರಪ್ಪಾ, ನನ್ನವಳದ್ದೂ ಇಂಥದ್ದೇ ಕಂಪ್ಲೇಂಟು. ಅವಳನ್ನು ಹೊರಗಡೆ ಕರೆದೊಯ್ಯುವುದಿರಲಿ, ಒಟ್ಟಿಗೆ ಕೂತು ಊಟ ಮಾಡದೆ ಎಷ್ಟು ದಿನಗಳಾದವು ಗೊತ್ತಾ' ಎಂದ. 'ಹಾರ್ಟ್ ಪೇಶೆಂಟ್ಗಳ ಸಂಖ್ಯೆ ಸಿಕ್ಕಾಪಟ್ಟೆ ಏರ್ತಾ ಇದೆ ಮಾರಾಯಾ. ಸರ್ಜರಿಗಳ ಕೇಸ್ ಏನ್ ಕೇಳ್ತಿಯಾ? ಒಮ್ಮೊಮ್ಮೆಯಂತೂ ಸುಸ್ತಾಗಿ ಬಿಡುತ್ತೆ. ದಿನಕ್ಕೆ ಮೂರ್ನಾಲ್ಕು ಸರ್ಜರಿಗಳು. ಆದರೂ ಕ್ಯೂ ಮುಗಿದಿರಲ್ಲ' ಎಂದು ಹೇಳಿದ.
ಈಗಿನ ದಿನಮಾನದಲ್ಲಿ ಹೃದ್ರೋಗಗಳಿಗೆ ತುತ್ತಾಗುವವರ ಸಂಖ್ಯೆ ಏರುಗತಿಯಲ್ಲಿರುವುದು ಹೊಸ ವಿಷಯವೇನಲ್ಲ. ಆರೋಗ್ಯಕರ ಜೀವನಶೈಲಿಯೂ ನಮ್ಮದಲ್ಲ, ಒಳ್ಳೆಯ ಆಹಾರವನ್ನು ತಿನ್ನುವ ಅಭ್ಯಾಸವೂ ನಮಗಿಲ್ಲ. ಅದರ ಜತೆಗೆ ಒತ್ತಡ ಮರೆಯಲು ಒಂದಷ್ಟು ಕೆಟ್ಟ ಹವ್ಯಾಸಗಳು ಬೇರೆ. ಆರೋಗ್ಯ ಸರಿಯಾಗಿರಬೇಕು ಎಂದರೆ ಹೇಗೆ?
ನಮ್ಮ ಮನೆಗಳಲ್ಲಿ ಓವರ್ಹೆಡ್ ಟ್ಯಾಂಕ್ಗಳಿರುತ್ತವಲ್ಲ. ಸಂಪ್ನಿಂದ ನೀರನ್ನು ಟ್ಯಾಂಕ್ಗೆ ಕಳಿಸುತ್ತೇವೆ. ಅಲ್ಲಿಂದ ಮನೆಯ ಎಲ್ಲ ಕೊಳಾಯಿಗಳಿಗೆ ಪೂರೈಕೆ. ಎಲ್ಲಾದರೂ ಕೊಳವೆ ಕಟ್ಟಿಕೊಂಡಿತು ಎಂದಾದರೆ ನೀರು ಪೂರೈಕೆ ಬಂದ್! ಹೃದಯವೂ ಹಾಗೆಯೇ. ಇಡೀ ದೇಹಕ್ಕೆ ಅಗತ್ಯವಿರುವ, ಆಮ್ಲಜನಕಯುಕ್ತ ರಕ್ತವನ್ನು ಪೂರೈಸುವುದೇ ಹೃದಯ. ರಕ್ತನಾಳಗಳು ನೀರಿನ ಕೊಳವೆಗಳಿದ್ದಂತೆ. ರಕ್ತನಾಳಗಳಲ್ಲಿ ಅಡೆತಡೆಗಳು ಎದುರಾದರೆ, ರಕ್ತ ಹೆಪ್ಪುಗಟ್ಟಿದರೆ ಸುಗಮ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಒಂದು ಹಂತದವರೆಗೆ ಹೃದಯ ಅದನ್ನು ಸಹಿಸಿಕೊಳ್ಳುತ್ತದೆ ಮತ್ತು ವಿಶೇಷ ಹಾರ್ಮೋನುಗಳ ಮೂಲಕ ರಕ್ತವನ್ನು ತೆಳುವಾಗಿಸಲು ಪ್ರಯತ್ನಿಸುತ್ತದೆ. ಆ ಎಲ್ಲ ಯತ್ನಗಳೂ ವಿಫಲವಾದಾಗ ಹೃದಯಾಘಾತ, ಹೃದಯ ವೈಫಲ್ಯ, ಹೃದಯ ಬಡಿತದಲ್ಲಿ ವ್ಯತ್ಯಾಸ (ಸಾಮಾನ್ಯವಾಗಿ ಹೃದಯ ಬಡಿತ ಪ್ರತಿ ನಿಮಿಷಕ್ಕೆ 60ರಿಂದ 100. ವಯಸ್ಕ ವ್ಯಕ್ತಿಗಳಲ್ಲಿ ಸರಾಸರಿ ಬಡಿತ ಪ್ರತಿ ನಿಮಿಷಕ್ಕೆ 72.) ಮತ್ತಿತರ ತೊಂದರೆಗಳು ಶುರುವಾಗುತ್ತವೆ.
ಮತ್ತೆ ನನ್ನ ವಿಷಯಕ್ಕೆ ಬರುತ್ತೇನೆ. ಹೃದಯಕ್ಕೆ ಸಂಬಂಧಿಸಿದ ತೊಂದರೆಗಳಲ್ಲಿ ಆಹಾರದ್ದೇ ಮುಖ್ಯ ಪಾತ್ರ. ಅಪಧಮನಿಗಳನ್ನು ಅಗಲವಾಗಿಟ್ಟು, ಗಟ್ಟಿಗೊಳಿಸುವ ಕೆಲಸವನ್ನು ಆಹಾರ ಮಾಡುತ್ತದೆ. ರಕ್ತನಾಳಗಳಲ್ಲಿ ಬ್ಲಾಕೇಜ್ಗಳನ್ನು ತಡೆಯಲು ಅಗತ್ಯವಿರುವ ರಾಸಾಯನಿಕಗಳನ್ನು ಪೂರೈಸುವುದು ಆಹಾರವೇ. ಹೃತ್ಕವಾಟಗಳಿಗೆ ಧಕ್ಕೆಯಾಗುವುದನ್ನೂ ಆಹಾರ ತಡೆಯಬಲ್ಲದು. ರಕ್ತ ಮಂದವಾಗುವುದನ್ನು ತಪ್ಪಿಸಿ, ಸರಾಗ ಹರಿಲಿಗೆ ಅವಕಾಶ ಕಲ್ಪಿಸಿ, ಕೊಲೆಸ್ಟರಾಲ್ ಕಡಿಮೆ ಮಾಡುವುದು ಕೂಡ ಆಹಾರವೇ. ರಕ್ತದೊತ್ತಡ ಕಡಿಮೆ ಮಾಡಲು ಹೃದಯದ ಕವಾಟಗಳು ಮತ್ತು ರಕ್ತನಾಳಗಳಿಗೆ ಅಗತ್ಯವಿರುವ ರೆನಿನ್, ಆ್ಯಂಜಿಯೊಟೆನ್ಸಿನ್ನಂಥ ವಿಶೇಷ ಹಾರ್ಮೋನುಗಳನ್ನು ರವಾನಿಸುವುದೂ ನಮ್ಮ ಆಹಾರವೇ. ಇನ್ಸುಲಿನ್ ಸ್ರವಿಸುವಿಕೆಗೆ ಉತ್ತೇಜಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದೂ ನಾವು ಸೇವಿಸುವ ಆಹಾರವೇ.
ಈಗ ಹೇಳಿ. ಆಹಾರಕ್ಕೆ ಏನೆಲ್ಲ ತಾಕತ್ತು ಇದೆ ಅಲ್ಲವಾ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com