ಕವಲೂರು ಕಿಲ್ಲೆ

ಕವಲೂರು ಕಿಲ್ಲೆ
Updated on: 

ತಕ್ಷಣಕ್ಕೆ ಇವು ಕೋಟೆಯಂತೆ ಗೋಚರಿಸಿದರೂ ತಪ್ಪಿಲ್ಲ. ಅಂಥದ್ದೇ ಇತಿಹಾಸವನ್ನೂ ಅವು ಹೊಂದಿರುತ್ತವೆ. ವಿಸ್ತಾರ, ಭವ್ಯತೆ, ಪರಂಪರೆ, ಸೌಲಭ್ಯ ಎಲ್ಲ ರೀತಿಯಿಂದಲೂ ಇವು ಕೋಟೆಯ ಕಿರು ಕೃತಿಗಳು. ಅವನ್ನು ನೀವು ಕಿಲ್ಲೆ ಎನ್ನಬಹುದು. ವಾಡೆ ಎಂದರೂ ಆದೀತು. ಕೆಲವೆಡೆ ದೇಶಗತಿ ಎನ್ನುವುದೂ ಇದೆ. ಅದರಲ್ಲಿರುವವರಿಗೆ ಮಾಲಿಪಾಟೀಲರು, ದೇಶಪಾಂಡೆಯವರು, ದೇಸಾಯಿಯವರು... ಹೀಗೆ ನಾನಾ ಹೆಸರು. ಒಂದು ರೀತಿಯಲ್ಲವರು ಪಾಳೆಯಗಾರರಿದ್ದಂತೆ.
ಹೌದು, ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಹೀಗೆ ಕರೆಸಿಕೊಳ್ಳುತ್ತಿದ್ದವರು ಒಂದಷ್ಟು ಹಳ್ಳಿಗಳ ಸಮೂಹದ ದಂಡಾಧಿಕಾರಿಗಳಿದ್ದಂತೆ ಇದ್ದರು. ಇವರು ವಾಸಿಸುವ ಮನೆಗಳು ವಿಶಾಲವಾಗಿದ್ದು, ಅಚ್ಚುಕಟ್ಟಾದ ಎಲ್ಲ ಸೌಕರ್ಯಗಳನ್ನೂ ಒಳಗೊಂಡಿರುತ್ತಿದ್ದವು. ಇಂಥ ಐತಿಹಾಸಿಕ ಕಿಲ್ಲೆಯೊಂದು ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದಲ್ಲಿದೆ.

ವಲಸಿಗರ ನೆಲೆ
ಸುಮಾರು 3 ಎಕರೆಯಷ್ಟು ವಿಸ್ತಾರದ ಕವಲೂರು ಮಾಲಿಪಾಟೀಲರ ಈ ಭವ್ಯ ಕಿಲ್ಲೆ ಸಂದರ್ಶನ ಯೋಗ್ಯ ತಾಣ.  ಅಂದಾಜು 5 ರಿಂದ 6 ನೂರು ವರ್ಷಗಳಷ್ಟು ಹಿಂದೆ ನಿರ್ಮಾಣಗೊಂಡದ್ದಿರಬಹುದು. ನೂರಾರು ಕೊಠಡಿಗಳು, ಅಡುಗೆಮನೆ, ಪ್ರಾಂಗಣ, ನ್ಯಾಯದಾನದ ಕಟ್ಟೆ, ಬಡಿಗೇರರ ಕುಲುಮಿ, ಹಕ್ಕಿಗೂಡು, ಬದಾಮಿ ಕಲ್ಲಿನ ಸುಂದರ ದ್ವಾರಗಳು, ದೇವಾಲಯ, ಮನೆತನದ ಹಿನ್ನೆಲೆ ಸಾರುವ ಶಾಸನ, ಕಣಜಗಳು ಎಲ್ಲವೂ ಈ ಒಂದೇ ಸೂರಿನಲ್ಲಿವೇ.
ಕುಟುಂಬದ ಪೂರ್ವಜರು ಮೂಲತಃ ವಿಜಾಪುರ ಜಿಲ್ಲೆ ಪರ್ವತ ಪಾನಗಲ್ ಗ್ರಾಮದವರು. ದೆಹಲಿಯ ಸುಲ್ತಾನರು ದಕ್ಷಿಣ ಭಾರತದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಈ ಕುಟುಂಬ ಭೀಮಾ ನದಿ ದಾಟಿ ಮೊದಲು ಬೀಳಗಿಗೆ ವಲಸೆ ಬಂದು ಅಲ್ಲಿ ಗೌಡಕಿ ಪಡೆಯಿತು. ಕಾಲಾಂತರದಲ್ಲಿ ಕೊಪ್ಪಳ ತಾಲೂಕಿನ ಕವಲೂರು ಗ್ರಾಮಕ್ಕೆ ಬಂದು ನೆಲೆ ನಿಂತರು. ಬ್ರಾಹ್ಮಣ ದೇಸಾಯಿಯವರು ನಿರ್ಮಿಸಿದ್ದ ಕವಲೂರಿನ ಕಿಲ್ಲೆಯನ್ನು ಬೀಳಗಿಯಿಂದ ಬಂದ ಮಲ್ಲರೆಡ್ಡಿ ಗೌಡ ಖರೀದಿಸಿದ್ದರು ಎಂದು ಮಾಲಿಪಾಟೀಲ ಮನೆತನದ ವಾರಸುದಾರರು ತಿಳಿಸುತ್ತಾರೆ. ದಕ್ಷಿಣಾಭಿಮುಖವಾಗಿರುವ ಕಿಲ್ಲೆಯ ಮಹಾದ್ವಾರವೇ ಅದರ ಶ್ರೀಮಂತಿಕೆಯನ್ನು ಸಾರುತ್ತದೆ. ಕೋಟೆಯ ಸುತ್ತ ಮೂರು ವೀಕ್ಷಣಾ ಗೋಪುರಗಳಿವೆ.
ಕಿಲ್ಲೆಯ ಪ್ರತಿಯೊಂದು ಬೃಹತ್ ದ್ವಾರದ ಬಳಿಯೂ ಒಂದು ಚಿಕ್ಕ ಬಾಗಿಲನ್ನು ಇಡಲಾಗಿದೆ. ಸಂಜೆಯಾದ ಬಳಿಕ ದೊಡ್ಡ ದ್ವಾರವನ್ನು ಮುಚ್ಚಿ ಚಿಕ್ಕ ಬಾಗಿಲುಗಳನ್ನು ಬಳಸಲಾಗುತ್ತಿತ್ತು.

ಐತಿಹಾಸಿಕ ಮನೆ
ಸುಂದೂಕಗಳೆಂದು ಕರೆಯಲ್ಪ ಡುವ ಹಲವಾರು ದೊಡ್ಡ ಪೆಟ್ಟಿಗೆಗಳು ಇಂದಿಗೂ ಬಳಕೆಯಲ್ಲಿವೆ. ಕವಲೂರು ಗೌಡರ ಕಿಲ್ಲೆಯಲ್ಲಿ ಒಂದು ಬೃಹತ್ ಶಿಲಾ ಶಾಸನವಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ.
ಕಿಲ್ಲೆಯ ಗೌಡರಿಗಾಗಿಯೇ ಈ ಮನೆಯಲ್ಲಿ ಒಂದು ದೇವಾಲಯ ಇದೆ. ಸುಂದರ ಕಾಷ್ಠ ಶಿಲ್ಪದಿಂದ ಅಲಂಕೃತಗೊಂಡಿರುವ ಹರಿಹರೇಶ್ವರ ದೇವಾಲಯ ಮತ್ತೊಂದು ಪ್ರಮುಖ ಆಕರ್ಷಣೆ. ಕಾರ್ತೀಕ ಮಾಸದಲ್ಲಿ ಸಾರ್ವಜನಿಕ ಕಾರ್ತೀಕೋತ್ಸವದ ಪರಂಪರೆ ಈಗಲು ಮುಂದುವರಿದಿದೆ. ಅರಮನೆಯನ್ನೇ ಹೋಲುವ ಕಿಲ್ಲೆಯಲ್ಲಿ ವೈಭವೋಪೇತ ದೀಪಗಳು, ಜೋಕಾಲಿಗಳು, ಚಿತ್ತಾರದ ವಸ್ತುಗಳಿವೆ. ಮಹಾನವಮಿ ಧಾರಾವಾಹಿಯ ಚಿತ್ರೀಕರಣ ಇದೇ ವಾಡೆಯಲ್ಲಿ ನಡೆಯುತ್ತಿದೆ.

ಕೃಷಿ ಪ್ರಧಾನ
ಆ ಕಾಲದಲ್ಲಿ ಸಾವಿರಾರು ಎಕರೆ ಜಮೀನು ಹೊಂದಿದ್ದ ಕವಲೂರು ಗೌಡರ ಕಿಲ್ಲೆಯಲ್ಲಿ ದನದ ಕೊಟ್ಟಿಗೆ, ಮೇವು ಸಂಗ್ರಹಣೆಯ ಸ್ಥಳವೇ ಸುಮಾರು ಒಂದು ಎಕರೆಯಷ್ಟಿದೆ.
ಭೂಸುಧಾರಣೆ ಕಾಯಿದೆಯಡಿ ಇವರ ಭೂಮಿ ಹಂಚಿ ಹೋದುದರಿಂದ ಈಗ ಸುಮಾರು ಐದುನೂರು ಎಕರೆಯಷ್ಟು ಮಾತ್ರ ಉಳಿದಿದೆ. ಲಕ್ಷಾಂತರ ರು. ಬೆಲೆಬಾಳುವ ಎತ್ತುಗಳು ಈಗಲೂ ಇವೆ. ಕಿಲ್ಲೆಯ ನಿತ್ಯದ ಕೆಲಸ-ಕಾರ್ಯಗಳಿಗಾಗಿ ನೂರಾರು ಆಳುಗಳಿದ್ದಾರೆ. ಕಿಲ್ಲೆಯ ಮೊದಲ ಪ್ರಾಂಗಣದಲ್ಲಿ ಮಾಲಿಪಾಟೀಲ ಮನೆತನದ ಕೃಷಿ ಸಾಮಗ್ರಿಗಳು, ಉತ್ಪನ್ನಗಳ ಸಂಗ್ರಹವನ್ನು ದಾಸ್ತಾನು ಮಾಡಲು ವ್ಯವಸ್ಥೆ ಇದೆ. ಕಿಲ್ಲೆಗೌಡರ ಕೃಷಿ ಉಪಕರಣಗಳ ನಿರ್ಮಾಣಕ್ಕಾಗಿಯೇ ಪ್ರತ್ಯೇಕ ಬಡಿಗತನ, ಕಮ್ಮಾರಿಕೆಗೂ ಇಲ್ಲಿ ಕುಲುಮೆಗಳಿರುವುದು ಗಮನ ಸೆಳೆಯುತ್ತದೆ. ಪಾರಿವಾಳ ಮತ್ತಿತರ ಪಕ್ಷಿ ಪ್ರೇಮಿಗಳಾಗಿದ್ದ ಕಿಲ್ಲೆಗೌಡರು ಒಳ ಆವರಣದಲ್ಲಿ ಹಕ್ಕಿಗೂಡು ನಿರ್ಮಿಸಿದ್ದರು. ರಾಶಿ ಮಾಡಿದ ಧಾನ್ಯ ಚೀಲಗಳ ದಾಸ್ತಾನಿಗೆ ಪ್ರತ್ಯೇಕ ಮನೆ, ಕಣಜಗಳು ಇಲ್ಲಿವೆ.
ಕವಲೂರು ಗೌಡರು ಕಿಲ್ಲೆಯ ನಿರ್ವಹಣೆಗೆ ಪ್ರತಿವರ್ಷ ಲಕ್ಷಾಂತರ ರು. ಖರ್ಚು ಮಾಡುತ್ತಿದ್ದಾರೆ. ಹೀಗಿದ್ದೂ ನಿರ್ವಹಣೆ ಕೊರತೆ ಹಾಗೂ ಕಾಲದ ಒತ್ತಡಕ್ಕೆ ಸಿಲುಕಿ ಕಿಲ್ಲೆಯ ಕೆಲವು ಭಾಗ ನಾಶವಾಗಿದೆ. ಇತ್ತೀಚಿನ ದಿನಗಳಲ್ಲಿ ಮನೆತನದ ಹಲವು ಸದಸ್ಯರು ವಿದ್ಯಾವಂತರಾಗಿ ಬೆಂಗಳೂರಿನಂಥ ನಗರಗಳನ್ನು ಸೇರಿರುವದರಿಂದ ಕವಲೂರಿನಲ್ಲಿರುವ ಜಗದೀಶ್ವರಗೌಡ, ಬಸನಗೌಡ ಹಾಗೂ ಪ್ರದೀಪಗೌಡ ಕಿಲ್ಲೆಯ ಪರಂಪರೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಆಗಲೇ ಜಿಲ್ಲೆ!
ಇತ್ತೀಚಿನ ತಲೆಮಾರಿನವರು 1929ರಲ್ಲಿ ಬದಾಮಿ ಕಲ್ಲು ಬಳಸಿ, ನಿರ್ಮಿಸಿರುವ ಸುಂದರ ದ್ವಾರದಲ್ಲಿ ಇರಿಸಲಾಗಿರುವ ಫಲಕದಲ್ಲಿ 'ಕೊಪ್ಪಳ ಜಿಲ್ಲೆ' ಎಂದು ನಮೂದಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿಜಾಮಶಾಹಿ ಆಡಳಿತದಲ್ಲಿಯೇ ಕೊಪ್ಪಳ ಜಿಲ್ಲೆಯಾಗಿತ್ತೆಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತದೆ.

- ಮಂಜುನಾಥ ಡಿ. ಡೊಳ್ಳಿನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com