ಮತ್ತೆ ಬಂದ ಬಳ್ಳಿ

ಮತ್ತೆ ಬಂದ ಬಳ್ಳಿ
Updated on: 

ಎಲ್. ಆರ್. ಈಶ್ವರಿ...
ಒಂದು ಕಾಲದ ಪ್ರಸಿದ್ಧ ಗಾಯಕಿ. ಹಾಡೆಂದರೆ ಅಂತಿಂತಹ ಹಾಡಲ್ಲ, ಮಬ್ಬುಗತ್ತಲ ಕೋಣೆ, ಶೃಂಗಾರವನ್ನೇ ಹಾಸಿ ಹೊದ್ದ ಸೆಟ್ಟುಗಳಲ್ಲಿ ಅನಾವರಣಗೊಳ್ಳುತ್ತಿದ್ದ ಬೆಚ್ಚನೆಯ ಹಾಡುಗಳು. ಮೈ ಮರೆಸುವ ಐಟಂ ಹಾಡುಗಳು ಅವು. ಅದರಲ್ಲೂ ಈಶ್ವರಿ ಅವರ ಕಂಠದಲ್ಲಿ ಅರಳಿದ ಕ್ಯಾಬರೆ ಹಾಡಂತೂ ಕೇಳುಗರಿಗೆ ಹುಚ್ಚು ಹಿಡಿಸುತ್ತಿತ್ತು. 'ಜೋಕೆ ನಾನು ಬಳ್ಳಿಯ ಮಿಂಚು...' ಎಂದು ಆಗಿನ ಬಹು ಬೇಡಿಕೆಯ ನಟಿ ಜಯಮಾಲ ಹೆಜ್ಜೆ ಹಾಕುತ್ತಿದ್ದರೆ ನೋಡುಗರ ಕಣ್ಣಿಗೆ ಹಬ್ಬವೋ ಹಬ್ಬ. ಅದೇ ರೀತಿ ಆ ಹಾಡಿಗೆ ಧ್ವನಿ ನೀಡಿದ ಎಲ್.ಆರ್.ಈಶ್ವರಿಯನ್ನು ಮರೆಯಲುಂಟೆ. 'ದೂರದಿಂದ ಬಂದಂಥ ಸುಂದರಾಂಗ ಜಾಣ...', 'ವಯಸ್ಸು ಹದಿನೆಂಟು...', 'ರಸಿಕಾ ರಸಿಕಾ...' ಮುಂತಾದ ಹಾಡುಗಳು ನೆನಪಾದರೆ ಸಾಕು, ಈ ಎಲ್.ಆರ್. ಈಶ್ವರಿ ಎಲ್ಲರ ಈಶ್ವರಿಯಾಗಿ ಬಿಡುತ್ತಾರೆ.
ಈ ಹಿರಿಯ ಗಾಯಕಿ ಮತ್ತೆ ಈಗ ಕನ್ನಡಕ್ಕೆ ಬಂದಿದ್ದಾರೆ. ನಟ ಶರಣ್ ಅಭಿನಯದ, ಆನಂದ್ ಆಡಿಯೋ ಮೋಹನ್ ನಿರ್ಮಾಣದ 'ವಿಕ್ಟರಿ' ಚಿತ್ರದ ಹಾಡೊಂದಕ್ಕೆ ಈಶ್ವರಿ ಕಂಠ ನೀಡಿದ್ದಾರೆ. ಒಂದು ಕಾಲದಲ್ಲಿ ಕ್ಯಾಬರೆ ಹಾಡುಗಳಿಗೆ ಹೊಸ ಚೈತನ್ಯ ನೀಡಿದ ಈಶ್ವರಿಯ ಕಂಠ ತುಂಬಾ ವರ್ಷಗಳ ನಂತರ ಮತ್ತೆ ಕನ್ನಡದಲ್ಲಿ ಕೇಳಿಸುತ್ತಿದೆ. ಇವರ ಕಂಠವನ್ನು ಕೇಳಿದ ತಮಿಳಿನ ಪ್ರಸಿದ್ಧ ನಿರ್ದೇಶಕ ಕೆ. ಬಾಲಚಂದರ್ 'ಎಲ್.ಆರ್. ಈಶ್ವರಿ' ಎಂದರೆ 'ಲವ್ ರೊಮ್ಯಾನ್ಸ್ ಈಶ್ವರಿ' ಎಂದು ಕರೆದಿದ್ದೇ ಮುಂದೆ ನಿಕ್‌ನೇಮ್ ಆಯ್ತು. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಿಗೆ ಸಾಕಷ್ಟು ಹಾಡುಗಳನ್ನು ಹಾಡಿರುವ ಎಲ್.ಆರ್. ಈಶ್ವರಿ 'ಸಿಪಾಯಿ ರಾಮು' ಚಿತ್ರದ ನಂತರ ಮತ್ತೆ ಕನ್ನಡದಲ್ಲಿ ಹಾಡಿಲ್ಲ ಎನ್ನುವ ಮಾಹಿತಿ ಇದೆ.
'ನಮ್ಮ ಚಿತ್ರದಲ್ಲಿ ಅವರಿಂದ ಒಂದು ಹಾಡು ಹಾಡಿಸಬೇಕೆಂದು ನಾಲ್ಕೈದು ತಿಂಗಳಿಂದ ಪ್ರಯತ್ನ ಪಟ್ಟು ಕೊನೆಗೆ ಒಪ್ಪಿಸಿ ಹಾಡಿಸಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಾಡು. ಈ ಹಾಡಿಗೆ ರಾಗಿಣಿ ನೃತ್ಯ ಮಾಡಿದ್ದಾರೆ. ನಮ್ಮ ಆಡಿಯೋ ಕಂಪನಿಗೆ 50ಕ್ಕೂ ಹೆಚ್ಚು ಆಲ್ಬಂ ಹಾಡುಗಳನ್ನು ಬರೆದಿರುವ ಉತ್ತರ ಕರ್ನಾಟಕದ ಶಿವು ಬೆರಗಿ ಎಂಬುವರು ಬರೆದಿರುವ 'ಅಕ್ಕ ನಿನ್ ಮಗಳು ನನಗೆ ಚಿಕ್ಕವ್ಳು ಆಗಲ್ವಾ' ಹಾಡನ್ನು ತುಂಬಾ ಚೆನ್ನಾಗಿ ಈಶ್ವರಿ ಅವರು ಹಾಡಿದ್ದಾರೆ' ಎನ್ನುತ್ತಾರೆ ಆನಂದ್ ಆಡಿಯೋ ಮೋಹನ್.
ಈಗಾಗಲೇ ಹಾಡಿನ ಚಿತ್ರೀಕರಣ ಹಾಗು ಹಾಡಿನ ಧ್ವನಿ ಮುದ್ರಣ ಕೂಡ ಮುಗಿದಿದೆ. 'ತುಪ್ಪಾ ಬೇಕಾ ತುಪ್ಪಾ...' ಎಂದ ರಾಗಿಣಿ ಎಲ್.ಆರ್. ಈಶ್ವರಿಯ ಹಾಡಿಗೆ ಹೇಗೆ ಹೆಜ್ಜೆ ಹಾಕಿದ್ದಾರೆಂಬುದು ಸದ್ಯ ಪಡ್ಡೆ ಹುಡುಗರ ಯೋಚನೆ.

-ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com