ಊಟ ಬಲ್ಲವನಿಗೆ ರೋಗವಿಲ್ಲ!

Updated on

ಆಧುನಿಕ ವಿಜ್ಞಾನ ಎಲ್ಲಾ ರಂಗಗಳಲ್ಲೂ ಉಂಟುಮಾಡಿರುವ ಕ್ರಾಂತಿ ಗೊತ್ತಿರುವಂಥದ್ದೇ. ಅದರ ಪ್ರಭಾವ ಸಂಶೋಧನೆಗಳ ಮೇಲೂ ಆಗಿದೆ, ಪ್ರಯೋಗಾಲಯಗಳ ಮೇಲೂ ಆಗಿದೆ. ಆಹಾರದ ಸಣ್ಣ ತುಣುಕಿನಲ್ಲಿ ಏನೆಲ್ಲ ಅಂಶಗಳಿವೆ, ಎಷ್ಟೆಲ್ಲ ರಾಸಾಯನಿಕಗಳಿವೆ ಎಂಬುದನ್ನು ಪತ್ತೆ ಮಾಡಬಲ್ಲ, ಬಹುಶಃ ನಮ್ಮನಿಮ್ಮ ಊಹೆಗೂ ನಿಲುಕದ ಅತ್ಯಾಧುನಿಕ ಪರಿಕರಗಳು ಈಗ ಲಭ್ಯವಿವೆ. ಆಹಾರ ನಮ್ಮ ದೇಹದೊಳಕ್ಕೆ ಪ್ರವೇಶಿಸಿದಾಗಿನಿಂದ ಜೀರ್ಣಗೊಂಡು ತ್ಯಾಜ್ಯ ಹೊರಬೀಳುವವರೆಗಿನ ಸೂಕ್ಷ್ಮಾತಿಸೂಕ್ಷ್ಮ ಜೈವಿಕ ಕ್ರಿಯೆಗಳನ್ನೂ ದಾಖಲಿಸಲು ಇವತ್ತು ಸಾಧ್ಯವಿದೆ. ಇದು ಆಹಾರವು ರೋಗಕ್ಕೆ ಹೇಗೆ ಕಾರಣವಾಗಬಲ್ಲದು ಅಥವಾ ಯಾವ ರೀತಿ ರೋಗ ನಿರೋಧಕವಾಗಿ ಕೆಲಸ ಮಾಡಬಲ್ಲದು ಎನ್ನುವುದನ್ನು ನಿಖರವಾಗಿ ಪತ್ತೆ ಮಾಡಲು ನೆರವಾಗಿದೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಹಾರ ಮತ್ತು ಆರೋಗ್ಯದ ಸಂಬಂಧದ ಬಗ್ಗೆ ಆಳವಾದ ಸಂಶೋಧನೆಗಳು ಶುರುವಾಗಿವೆ. ಕಡಿಮೆ ಅನಾರೋಗ್ಯಕ್ಕೆ ಒಳಗಾಗುವ ಸಮುದಾಯಗಳನ್ನು ಗುರುತಿಸಿ, ಅವರ ಆಹಾರ ಪದ್ಧತಿಯನ್ನು ವಿಶ್ಲೇಷಿಸುವ ಪ್ರಯತ್ನಗಳನ್ನು ವಿಜ್ಞಾನಿಗಳು ಈಗಾಗಲೇ ಮಾಡಿದ್ದಾರೆ. ಉದಾಹರಣೆಗೆ ಹೇಳಬೇಕಿದ್ದರೆ, ಮೆಡಿರೇನಿಯನ್ ಸಮುದ್ರದ ಸುತ್ತಲಿನ ರಾಷ್ಟ್ರಗಳು ಮತ್ತು ಜಪಾನೀಯರ ಆರೋಗ್ಯ- ಆಹಾರಗಳ ಅಧ್ಯಯನ ನಡೆದಿದೆ. ಅದರಲ್ಲೂ ನಿರ್ದಿಷ್ಟ ಪ್ರದೇಶ, ಪಂಗಡಗಳನ್ನಾಗಿ ವಿಭಜಿಸಿ ಅಧ್ಯಯನ ನಡೆಸಲಾಗಿದೆ.
ಪತ್ತೆಯಾದ ಕುತೂಹಲದ ಸಂಗತಿ ಎಂದರೆ ಒಂದು ಪಂಗಡದಲ್ಲಿ ನಿರ್ದಿಷ್ಟ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಪಂಗಡದಲ್ಲಿ ಅಂಥ ಕಾಯಿಲೆಯೇ ಇಲ್ಲ! ಆಗ ಎರಡೂ ಪಂಗಡಗಳ ಆಹಾರ ಪದ್ಧತಿಯನ್ನು ಹೋಲಿಕೆ ಮಾಡಲಾಗಿದೆ. ಒಂದು ಪಂಗಡದಲ್ಲಿ ಅದೇ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳಲು ಮತ್ತು ಮತ್ತೊಂದು ಪಂಗಡದಲ್ಲಿ ಆ ಕಾಯಿಲೆಯ ಅಸ್ತಿತ್ವವೇ ಇಲ್ಲದಿರಲು ಕಾರಣ ಅವರು ರೂಢಿಸಿಕೊಂಡಿದ್ದ ಆಹಾರ ಪದ್ಧತಿ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲವಲ್ಲ.
ಆಹಾರದ ಮಹತ್ವವನ್ನು ಬಣ್ಣಿಸಿದಷ್ಟೂ ಕಡಿಮೆಯೇ. ವೃದ್ಧಾಪ್ಯದಲ್ಲಿ ಕಣ್ಣು ಮಂಜಾಗಿ ಕ್ಯಾಟರಾಕ್ಟ್ ಬರುವುದನ್ನು ತಡೆಯುವ; ಶ್ವಾಸಕೋಶವನ್ನು ಚೆನ್ನಾಗಿಟ್ಟು ಉಸಿರಾಟ ವ್ಯವಸ್ಥೆ ಉತ್ತಮಪಡಿಸುವ; ಸಂಧಿವಾತ ಗುಣಪಡಿಸುವ; ತಲೆನೋವು, ಆಸ್ತಮಾಗಳನ್ನು ನಿವಾರಿಸುವ; ಅಲ್ಸರ್ ಬಾರದಂತೆ ತಡೆಯಲು ಉದರದ ಸಾಮರ್ಥ್ಯ ಹೆಚ್ಚಿಸುವ; ರೋಗ ನಿರೋಧಕ ಹೆಚ್ಚಿಸುವ ತಾಕತ್ತು ನಮ್ಮ ಆಹಾರದಲ್ಲಿಯೇ ಇದೆ.
'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂದು ನಮ್ಮ ಹಿರಿಯರು ಹೇಳಿದ್ದು ಸುಮ್ಮನೆ ಅಲ್ಲ. 

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com