ತಟ್ಟು ಚಪ್ಪಾಳೆ

ಐಪಿಎಲ್‌ನ ಆರನೇ ಅವತರಣಿಕೆಯಲ್ಲಿ ಸ್ಟಾರ್ ಆಟಗಾರರಿಗಿಂತ ಹೆಚ್ಚು ಫೋಕಸ್ ಆಗುತ್ತಿರೋದು ಅವರ ಸಂಗಾತಿಗಳೇ.
ತಟ್ಟು ಚಪ್ಪಾಳೆ
Updated on

ಐಪಿಎಲ್‌ನ ಆರನೇ ಅವತರಣಿಕೆಯಲ್ಲಿ ಸ್ಟಾರ್ ಆಟಗಾರರಿಗಿಂತ ಕ್ಯಾಮೆರಾದೆದುರು ಹೆಚ್ಚು ಫೋಕಸ್ ಆಗುತ್ತಿರೋದು ಅವರ ಸಂಗಾತಿಗಳೇ. ಕೆಲವೊಮ್ಮೆ ಸ್ಟಾರ್ ಆಟಗಾರರಿಗಿಂತ ಅವರಿಗೇ ಪ್ರಾಮುಖ್ಯ ಸಿಗುತ್ತಿದೆಯೇನೋ ಎನ್ನುವಷ್ಟು ಗ್ಲ್ಯಾಮರಸ್ಸಾಗಿ ಕಾಣಿಸಿಕೊಳ್ಳುವ ಅವರ ಗರ್ಲ್‌ಫ್ರೆಂಡ್‌ಗಳಿಗೂ ಈಗ ಸಿಕ್ಕಾಪಟ್ಟೆ ಫ್ಯಾನ್ಸು...

ಗ್ಯಾಲರಿಯಲ್ಲಿ ಬಾಲೆಯಿದ್ದರೆ ಮೈದಾನದಲ್ಲಿ ಬಾಲ್ ಪುಟಿಯುತ್ತದೆ. ನೆಚ್ಚಿನ ಟೀಮು ಗೆಲ್ಲುವ ಆಸೆ ಪಲ್ಟಿ ಹೊಡೆದರೂ ಪರ್ವಾಗಿಲ್ಲ... ಚಚ್ಚಿಸಿಕೊಂಡ ಆ ಚೆಂಡು ರೆಕ್ಕೆ, ಚಕ್ರ ಕಟ್ಟಿಕೊಂಡು ಪುರ್ರನೆ ಹಾರಿಯೋ ಜಾರಿಯೋ ಹೋಗಬೇಕಷ್ಟೇ. ಡಿಜಿಟಲ್ ಪರದೆ ಮೇಲೆ ಅದು ಸಿಕ್ಸು, ಫೋರುಗಳಾಗಿ ಕೌಂಟ್ ಆಗಬೇಕು. 'ಯಾಕಾಗಿ?' ಎಂದು ಕೇಳಿದರೆ, ರಸಿಕ ಪ್ರೇಕ್ಷಕ ನಾಚಿಕೆ ಮರೆಮಾಚಿ ಹೇಳೋದು ಹೀಗೆ, 'ಬ್ಯಾಟ್ಸ್‌ಮನ್‌ಗಳ ಗರ್ಲ್‌ಫ್ರೆಂಡ್‌ಗಳನ್ನು ನೋಡ್ಬಹುದಲ್ಲ'!
ಚೆಂಡಿಗೆ ಬೌಂಡರಿಯಾದರೇನೋ, ಸಿಕ್ಸರಾದರೇನೋ? ಆದರೆ, ಕ್ಯಾಮೆರಾಮನ್ನರಿಗೆ ಚೆಂಡಿನ ಆ ಪ್ರಚಂಡತೆಗಳು ಅತಿಮುಖ್ಯ. ವಿಕೆಟ್ ಬಿದ್ದಾಗಲೆಲ್ಲ, ಫೋರು, ಸಿಕ್ಸರು ಹೊಳೆಯಾದಾಗಲೆಲ್ಲ ಆಟಗಾರನ ಗರ್ಲ್‌ಫ್ರೆಂಡ್‌ಗಳ ಕಡೆಗೊಂದು ಸ್ನ್ಯಾಪ್ ಇಲ್ಲವೇ ಚುಟುಕು ವಿಡಿಯೋ. ಐಪಿಎಲ್‌ನ ಆರನೇ ಅವತರಣಿಕೆಯಲ್ಲಿ ಸ್ಟಾರ್ ಆಟಗಾರರಿಗಿಂತ ಕ್ಯಾಮೆರಾದೆದುರು ಹೆಚ್ಚು ಫೋಕಸ್ ಆಗುತ್ತಿರೋದು ಅವರ ಸಂಗಾತಿಗಳೇ. ಕೆಲವೊಮ್ಮೆ ಸ್ಟಾರ್ ಆಟಗಾರರಿಗಿಂತ ಅವರಿಗೇ ಪ್ರಾಮುಖ್ಯ ಸಿಗುತ್ತಿದೆಯೇನೋ ಎನ್ನುವಷ್ಟು ಗ್ಲ್ಯಾಮರಸ್ಸಾಗಿ ಕಾಣಿಸಿಕೊಳ್ಳುವ ಅವರ ಗರ್ಲ್‌ಫ್ರೆಂಡ್‌ಗಳಿಗೂ ಈಗ ಸಿಕ್ಕಾಪಟ್ಟೆ ಫ್ಯಾನ್ಸು. ಈ ಐಪಿಎಲ್‌ನಲ್ಲಿ ಮೇಲಿಂದ ಮೇಲೆ ದರ್ಶನಗೈದ ಆ 'ಹಾಟ್‌'ಲಿಸ್ಟ್ ಅನ್ನು ಬಹುಶಃ ನಿಮ್ಮ ಕಣ್ಣೂ ಮಿಸ್ ಮಾಡಿಕೊಂಡಿಲ್ಲ.

ಕೊಹ್ಲಿ ಹುಡುಗಿ ಲೆಯಿಟ್
ಜಾಹೀರಾತಿನಲ್ಲಿ ಮಿಲ್ಕೀ ಬ್ಯೂಟಿ ತಮನ್ನಾಳನ್ನು ಪಟಾಯಿಸಿದ್ದ ಕೊಹ್ಲಿ ಈಗ ರಿಯಲ್ಲಾಗಿಯೇ ಪಟಾಯಿಸಿದ್ದು ಫಾರಿನ್ ಬ್ರ್ಯಾಂಡನ್ನು! ಆರ್‌ಸಿಬಿಯ ಸೆಕ್ಸಿ ಕ್ಯಾಪ್ಟನ್ ಬಲೆ ಬೀಸಿರೋದು ಬ್ರೆಜಿಲ್ ಬಾಲೆಯತ್ತ. ಕೊಹ್ಲಿ ಸಿಕ್ಸರ್ ಬಾರಿಸಿದಾಗ ಅರಳುವ ಕೋಟಿ ಕೋಟಿ ಮುಖಗಳಲ್ಲಿ ಮೊದಲನೆಯದ್ದು ಇಝಬೆಲ್ಲೆ ಲೆಯಿಟ್‌ಳದ್ದು. ಈ ಮಾಡೆಲ್ ಕೊಹ್ಲಿಗಾಗಿಯೇ ಮುಂಬೈಗೆ ಶಿಫ್ಟ್ ಆದವಳು. ಕೊಹ್ಲಿ ಔಟಾದರೆ ಇವಳು 'ಕಂಬನಿಯ ಕೊಹ್ಲಿ'! ಇವರಿಬ್ಬರ ಗುಪ್ತಪ್ರೀತಿಗೆ 5 ತಿಂಗಳು. 4 ತಿಂಗಳ ಹಿಂದೆ, ಕೊಹ್ಲಿ ಸಿಂಗಾಪುರದಲ್ಲಿ ಈಕೆಯ ವ್ಯಾನಿಟಿ ಬ್ಯಾಗ್ ಹಿಡಿದು ಸ್ಟ್ರೀಟ್‌ವಾಕ್ ಮಾಡುತ್ತಿರುವ ದೃಶ್ಯ ಇಂಟರ್ನೆಟ್ಟಿನಲ್ಲಿ ಅಮೋಘ ಟಿಆರ್‌ಪಿ ಗಿಟ್ಟಿಸಿಕೊಂಡಿತ್ತು. ಕೊಹ್ಲಿಯ ಪ್ರತಿ ರನ್‌ಗಳನ್ನೂ ಟ್ವಿಟ್ಟರ್‌ನಲ್ಲಿ ದಾಖಲಿಸುವ ಹುಚ್ಚಿ ಈ ಲೆಯಿಟ್. ಆರ್‌ಸಿಬಿಯ ಮ್ಯಾಚು ಬಂದರೆ ಗ್ಯಾಲರಿಯಲ್ಲಿ ಇವಳು ಸೌಂದರ್ಯದ ಲಹರಿ.

ಜಾಕ್- ಜಾರ್ಡಿನ್ ಜೋಡಿ
ಸೂರ್ಯನೇ ಮುತ್ತಿಕ್ಕಿದ್ದಾನೆ ಎನ್ನುವಷ್ಟು ಹೊಳಪಿನ ಚರ್ಮದ ನಟಿ, ರೂಪದರ್ಶಿ ಶಮೋನ್ ಜಾರ್ಡಿನ್. ದಕ್ಷಿಣ ಆಫ್ರಿಕದ ದೈತ್ಯಪ್ರತಿಭೆ, ಕೋಲ್ಕತ್ತಾ ನೈಟ್ ರೈಡರ್ಸ್‌ನ ಆಲ್‌ರೌಂಡರ್ ಜಾಕ್ ಕಾಲಿಸ್‌ನ ಗರ್ಲ್‌ಫ್ರೆಂಡ್. ಇವಳೂ ದಕ್ಷಿಣ ಆಫ್ರಿಕದವಳೇ. ಇವರಿಬ್ಬರಿಗೂ ಭಾರತದಲ್ಲೇ ಮದ್ವೆ ಆಗೋ ಆಸೆ ಈ ಐಪಿಎಲ್‌ನಲ್ಲಿ ಚಿಗುರಿದೆ. ಭಾರತದ ಮೂಲೆಯ ಹಳ್ಳಿಯಲ್ಲಿ ಹೊಸ ಬದುಕಿಗೆ ಕಾಲಿಡುವ ಕನಸಿವರಿಗೆ. ಆ ಕನಸಿನೊಟ್ಟಿಗೆ, ಕ್ರಿಕೆಟ್ ಪ್ರೀತಿಯನ್ನೂ ಬೆರೆಸಿ ಜಾರ್ಡಿನ್ ಗ್ಯಾಲರಿಯಲ್ಲಿ ನಿಂತು ಜಾಕ್‌ನ ಸಫಲತೆಗೆ ಸಾಕ್ಷಿಯಾಗುತ್ತಿದ್ದಾಳೆ.


ಸಿಂಘಾಳ ಟೈಟ್ ಲವ್
ಅವಳು ಮಶೂಮ್ ಸಿಂಘಾ. 'ಮಶ್ರೂಮ್‌'ಗಿಂತ ಮಸ್ತು ಬಿಳಿ. ಆಸೀಸ್ ವೇಗಿ, 'ರಾಜಸ್ಥಾನ ರಾಯಲ್ಸ್ ಎಕ್ಸ್‌ಪ್ರೆಸ್‌' ಶಾನ್ ಟೈಟ್ ಚೆಂಡೆಸೆದಿದ್ದು ಈ ಭಾರತೀಯ ಮಾಡೆಲ್ ಮೇಲೆ. ಅಡಿಲೈಡಿನ ಈ ಹುಡುಗ, ಮುಂಬೈನ ಈ ಮಿಂಚುಬಳ್ಳಿಯ ಲವ್ವಿನ ಸುದ್ದಿ ಹೆಚ್ಚು ಚಾಲ್ತಿಗೆ ಬಂದಿದ್ದೂ ಇದೇ ಐಪಿಎಲ್‌ನಲ್ಲಿ. ಟೈಟ್ ವಿಕೆಟ್ ಬೀಳಿಸಿದಾಗಲೆಲ್ಲ ಸಿಂಘಾ ಖುಷೀಲಿ ಶಿಳ್ಳೆ ಹೊಡೀತಾಳೆ. ಶಾನ್ ಅನ್ನು 'ಟೈಟ್‌' ಆಗಿ ತಬ್ಬಿಕೊಂಡು, ಇಲ್ಲಿನ ದೇವಸ್ಥಾನಗಳನ್ನು ಸುತ್ತಿಸಿ, ಭಾರತದರ್ಶನ ಮಾಡಿಸಿದ್ದು ಇವಳದ್ದೇ ಖರ್ಚಿನಲ್ಲಂತೆ. ಟ್ರಿಪ್ಪಿನ ಛಾಯಾಚಿತ್ರಗಳ ದೊಡ್ಡ ಆಲ್ಬಮ್ಮೇ ಸಿಂಘಾಳ ಕೈಯಲ್ಲುಂಟು. ಸಿಂಘಾ ಸಹವಾಸದಿಂದ ಟೈಟ್‌ಗೆ ಮನಃಶಾಂತಿ ಲಭಿಸಿದ್ದು ಯಾವ ದೇವರ ಪೂಜಾಫಲವೋ ಗೊತ್ತಿಲ್ಲ.

ಧೋನಿಗೊಬ್ಬಳು ಸಾಕ್ಷಿ
'ಚೆನ್ನೈ ಸೂಪರ್ ಕ್ವೀನ್‌' ಯಾರು ಅಂದ್ರೆ, ಯಾರೂ 'ಕುಮಾರಿ ಜಯಲಲಿತಾ' ಅನ್ನಲ್ಲ. ಸಾಕ್ಷಿ ರಾವತ್‌ಗೆ ಆ ಪಟ್ಟ ಸಿಕ್ಕಿದೆ. ಧೋನಿ ಕ್ರೀಸಿನಲ್ಲಿದ್ದಾಗ ಹತ್ತಾರು ಬಾರಿ, ಪಂದ್ಯ ಮುಗಿಯುವ ವರೆಗೆ ಟೋಟಲ್ಲಾಗಿ ಇಪ್ಪತ್ತು ಬಾರಿಯಾದರೂ ಕ್ಯಾಮೆರಾ ಕಣ್ಣೆದುರು ರಾರಾಜಿಸುವ ಚಿಗರೆ. ಕೆನ್ನೆಗಳ ಮೇಲೆ ಕೈಯಿಟ್ಟು, ಚಿಂತೆಗಳ ಮುದ್ದೆಯೋ ಬೆಣ್ಣೆ ಮುದ್ದೆಯೋ ಎನ್ನುವಷ್ಟು ಕನ್‌ಫ್ಯೂಸ್ ಹುಟ್ಟಿಸುವ ಸಾಕ್ಷಿ, ಪ್ರತಿ ಮ್ಯಾಚಿನಲ್ಲೂ ಗೆಳತಿ ಜತೆ ಗಲ್ಲ ತುಂಬಿಕೊಂಡು ನಗುವನ್ನು ಹಂಚಿಕೊಳ್ಳುವ ಮದ್ರಾಸ್ ಮಲ್ಲಿಗೆ! ಧೋನಿ ಔಟಾದರೆ ಅಷ್ಟೂ ಕಣ್ಣೀರನ್ನು ಖರ್ಚು ಮಾಡುತ್ತಾಳೆ. ಚೆನ್ನೈ ಗೆದ್ದರೆ ಚೆನ್ನಾಗಿ ನಗುತ್ತಾಳೆ. ಹ್ಞಾಂ, ಧೋನಿಯ ಹೆಲಿಕಾಪ್ಟರ್ ಶಾಟ್ ಸಾಕ್ಷಿಗೂ ಇಷ್ಟ.

ಜಾನ್ಸನ್‌ನ 'ಜೆಸ್ಸಿಕಾ' ಬೇಬಿ
'ಬೆಡ್ಡಿನಲ್ಲಿ ಸಿಗೋ ಸೆಕ್ಸಿನ ಸುಖ, ಮೈದಾನದಲ್ಲಿ ಕ್ರಿಕೆಟಿಗನ ಜೋಶ್ ಹೆಚ್ಚಿಸುತ್ತೆ' ಎಂಬ ಕಾಮತತ್ವವನ್ನು ಪ್ರತಿಪಾದಿಸಿದವಳು 'ಕರಾಟೆ ಬ್ಲ್ಯಾಕ್‌ಬೆಲ್ಟ್‌' ಜೆಸ್ಸಿಕಾ ಬ್ರಾಟಿಚ್. ಆಸೀಸ್‌ನ ವೇಗಿ, ಮುಂಬೈ ಇಂಡಿಯನ್ಸ್‌ನ ಬಿರುಗಾಳಿ ಮಿಚೆಲ್ ಜಾನ್ಸನ್ ಎದುರಾಳಿಯನ್ನು ಬೆಚ್ಚಿಬೀಳಿಸುವಂಥ ಮಹಾಸ್ವಪ್ನದ ಹಿಂದೆ ಈ ಮಹಾಸುಂದರಿ ಎದೆ ಏರಿಸಿ, ಚಪ್ಪಾಳೆ ತಟ್ಟುತ್ತಿರುತ್ತಾಳೆ. ಮನೇಲಿ ಗಂಡನೊಂದಿಗೆ ಗುಂಡು ಹಾಕುತ್ತಾ, ಗ್ಯಾಲರಿಯಲ್ಲಿ ಅರೆದುಂಡು ದುಂಡಾಗಿ ಕಾಣಿಸಿಕೊಳ್ಳುತ್ತಾ, ಕನ್ಯೆಯರ ಕಣ್ಣಲ್ಲೂ ಕಿಚ್ಚು ಹತ್ತಿಸು ಈ ಚೆಲುವೆ ಒಂದು ಮಗುವಿನ ತಾಯಿ ಅಂತ ಯಾರಾದ್ರೂ ಹೇಳ್ಲಿ ನೋಡೋಣ!

ಧವನ ದೇವತೆ ಇಶಾ
ಇಶಾ ಮುಖರ್ಜಿ... ಅರೆ ಆಂಗ್ಲ, ಅರೆ ಬಂಗಾಳಿ. ಫಿಫ್ಟಿ ಫಿಫ್ಟಿ ಪೀಸು. ಆದರೂ, ಆಂಗ್ಲರೊಂದಿಗೆ ಡಬಲ್ ಸೆಂಚುರಿ ಬಾರಿಸಿ, ಭಗತ್‌ಸಿಂಗ್‌ನಂತೆ ಮೀಸೆ ತಿರುವಿದ ಶಿಖರ್ ಧವನ್‌ಗೆ ಬೆನ್ನು ತಟ್ಟಿದವಳು. ಇಶಾಗೆ ಧವನ್ ಎರಡನೇ ಗಂಡ. ಮಾಜಿ ಪತಿಯಿಂದ ಆಕೆಗೆ ಇಬ್ಬರು ಮಕ್ಕಳು. ಶಿಖರ್ ಶಿಖರದೆತ್ತರಕ್ಕೆ ಬಾರಿಸುವ ಸಿಕ್ಸರ್‌ಗೆ ಮನಸ್ಸಾರೆ ಕುಣಿಯುವ ಇಶಾ, 2013ರ ಐಪಿಎಲ್‌ನ ಕ್ಯಾಮೆರಾಕ್ಕೆ ಹೊಸ ಮುಖ.

-ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com