ಜಾಬ್ಗೆ ಬಾಬಾ
ನಿರುದ್ಯೋಗಿಗಳು ಒಂದೇ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು. ವಿದ್ಯಾರ್ಹತೆ, ಅನುಭವಕ್ಕೆ ತಕ್ಕ ಉದ್ಯೋಗಾವಕಾಶಗಳ ಪಟ್ಟಿಯೇ ಅವರ ಮುಂದೆ....

ನಿರುದ್ಯೋಗಿಗಳು ಒಂದೇ ಒಂದು ಮಿಸ್ಡ್ಕಾಲ್ ಕೊಟ್ಟರೆ ಸಾಕು. ವಿದ್ಯಾರ್ಹತೆ, ಅನುಭವಕ್ಕೆ ತಕ್ಕ ಉದ್ಯೋಗಾವಕಾಶಗಳ ಪಟ್ಟಿಯೇ ಅವರ ಮುಂದೆ. ಇನ್ನು ಯಾರಿಗಾದರೂ ಮನೆಗೆಲಸದವರು, ಅಡುಗೆಯವರು ಬೇಕಿದ್ದರೆ ಅವರೂ ಬಾಬಾಜಾಬ್ ಸಂಪರ್ಕಿಸಬಹುದು. ಅವರ ಬಡಾವಣೆಯಲ್ಲೇ ಇರುವ ನುರಿತ ಕೆಲಸಗಾರರ ಯಾದಿ ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ.
ಮೈಕ್ರೊಸಾಫ್ಟ್ ಉದ್ಯೋಗಿಯಾಗಿದ್ದ ಶೇನ್ ಬ್ಲಾಗ್ಸ್ ವೆಡ್ತ್ ಅವರಿಗೆ ಬೆಂಗಳೂರಿನಲ್ಲಿ ಮನೆಗೆಲಸದವರು ಬೇಕಿತ್ತು. ಸಿಕ್ಕಾಪಟ್ಟೆ ಹುಡುಕಿದರು. ಅಂಥವರ ಬಗ್ಗೆ ಮಾಹಿತಿ ಕೊಡುವ ಯಾವ ಸಂಸ್ಥೆಯೂ ಇರಲಿಲ್ಲ. ಕೊನೆಗೂ ಮನೆಗೆಲಸಕ್ಕೆ ಮಂದಿ ಸಿಕ್ಕರು. ಆದರೆ ಇವರ ಮನೆ ಎಲ್ಲೊ, ಅಲ್ಲಿ ದುಡಿಯಲು ಬರುವವರ ಮನೆ ಮತ್ತೆಲ್ಲೊ. ಹತ್ತಾರು ಕಿ.ಮೀ ದೂರದಿಂದ ಬಂದು ತಿಂಗಳಿಡೀ ದುಡಿದರೂ ಸಿಗುವುದು ಮೂರೋ ನಾಲ್ಕೋ ಸಾವಿರ ರುಪಾಯಿ!
ಶೇನ್ ಆಗಲೇ ನಿರ್ಧರಿಸಿದರು, 'ಈ ಅಂತರ ನೀಗಲು ಏನಾದರೂ ಮಾಡಬೇಕು'. 2007ರಲ್ಲಿ ಬೆಂಗಳೂರಿನಲ್ಲಿ ಹಾಗೆ ಹುಟ್ಟಿದ್ದೇ ಬಾಬಾಜಾಬ್. ವೈಟ್ ಕಾಲರ್ ಜಾಬ್ ಹುಡುಕುವವರಿಗಿಂತ ಇವರ ಆದ್ಯತೆ ಕೆಳಸ್ತರದವರಿಗೆ. ಚಾಲಕ, ಜವಾನ, ಅಡುಗೆಯವರು, ಡೆಲಿವರಿ ಬಾಯ್ಸ್, ಹೌಸ್ಕೀಪಿಂಗ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್, ಸ್ಥಳೀಯ ಬಿಪಿಒಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಇಂಥವರಿಗೆ ಕೆಲಸ ಕೊಡಿಸಲು ಮುತುವರ್ಜಿ ತೋರುತ್ತಿದೆ. ದೊಡ್ಡ ಕೆಲಸ ಅಪೇಕ್ಷಿಸುವವರೂ ನೋಂದಾಯಿಸಿಕೊಳ್ಳಬಹುದು. ಕಾಯ್ದೆ ಪ್ರಕಾರ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ವೇತನ ತಿಂಗಳಿಗೆ 5,700 ರುಪಾಯಿ, ಭವಿಷ್ಯನಿಧಿ, ಇಎಸ್ಐ ಸೌಲಭ್ಯಗಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದೆ.
ಶುರುವಿನಲ್ಲಿ ಕೊಳೆಗೇರಿಗಳು, ಎನ್ಜಿಒಗಳ ನೆರವು ಪಡೆಯಿತು ಬಾಬಾಜಾಬ್. ಈಗ ನಿತ್ಯ 2,000- 2,100 ಅಭ್ಯರ್ಥಿಗಳು ದೇಶದ ಮೂಲೆಮೂಲೆಗಳಿಂದ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಭಾರತದ ಎಲ್ಲ ಮಹಾನಗರಗಳಲ್ಲೂ ಸಂಸ್ಥೆ ಬೇರುಬಿಟ್ಟಿದೆ. ಏಳು ಲಕ್ಷ ನಿರುದ್ಯೋಗಿಗಳು, 80 ಸಾವಿರ ಉದ್ಯೋಗದಾತ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. 3.5 ಲಕ್ಷದಿಂದ 4 ಲಕ್ಷ ಅಭ್ಯರ್ಥಿಗಳಿಗೆ ನೌಕರಿ ಸಿಕ್ಕಿರಬಹುದು ಎನ್ನುವುದು ಬಾಬಾಜಾಬ್ ಅಧಿಕಾರಿಗಳ ಅಂದಾಜು.
'ಉದ್ಯೋಗ ಅರಸುವ ಶೇ 10ರಷ್ಟು ಮಂದಿಯನ್ನೂ ನಾವು ತಲುಪಿಲ್ಲ. ನಮ್ಮ ಅಸಾಂಪ್ರದಾಯಿಕ ಕ್ಷೇತ್ರದಲ್ಲಿ ದುಡಿಯುತ್ತಿರುವವರನ್ನು ಒಳ್ಳೆ ಕಂಪನಿಗಳಿಗೆ ಸೇರಿಸುವುದು ನಮ್ಮ ಗುರಿ' ಎನ್ನುತ್ತಾರೆ ಬಾಬಾಜಾಬ್ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅಂಜನ್ಕುಮಾರ್.
ನೋಂದಣಿ ಹೇಗೆ?
ಬಾಬಾಜಾಬ್ ಪ್ಲೇಸ್ಮೆಂಟ್ ಸಂಸ್ಥೆಯಲ್ಲ, ಆದರೆ ಉದ್ಯೋಗ ಅರಸುವವರು ಮತ್ತು ಉದ್ಯೋಗದಾತರ ನಡುವಿನ ಕೊಂಡಿ. ಇದರ ಕಾರ್ಯನಿರ್ವಹಣೆ ಭಿನ್ನ. ಉದ್ಯೋಗಾಕಾಂಕ್ಷಿಗಳು ಎಸ್ಎಂಎಸ್, ಮಿಸ್ಡ್ ಕಾಲ್ ಅಥವಾ ಅಂತರ್ಜಾಲದ ಮೂಲಕ ಬಾಬಾಜಾಬ್ ಕಾಲ್ಸೆಂಟರ್ ಜತೆ ಸಂಪರ್ಕ ಸಾಧಿಸಬಹುದು. ಅಭ್ಯರ್ಥಿಗಳು ಉದ್ಯೋಗ ವಿಭಾಗ ಸೂಚಿಸಿ (ಉದಾಹರಣೆಗೆ- ಡ್ರೈವರ್) 55444ಗೆ ಸಂದೇಶ ಕಳಿಸಬಹುದು. ಅಥವಾ 08067683777ಗೆ ಮಿಸ್ಡ್ಕಾಲ್ ಕೊಡಬಹುದು. ಕಾಲ್ಸೆಂಟರ್ ತಂಡ ಮರು ಕರೆ ಮಾಡಿ ಅವರಿಂದ ವಿವರ ಸಂಗ್ರಹಿಸಿ ದಾಖಲಿಸಿಕೊಳ್ಳುತ್ತದೆ. www.babajob.com ನಲ್ಲಿಯೂ ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನಯಾಪೈಸೆ ಖರ್ಚು ಮಾಡಬೇಕಿಲ್ಲ. ಸಂಸ್ಥೆಗೆ ಕಮಿಷನ್ ಕೊಡಬೇಕಿಲ್ಲ.
ನೌಕರರನ್ನು ಹುಡುಕುತ್ತಿರುವ ಕಂಪನಿಗಳೂ 888046111ಕ್ಕೆ ಕರೆ ಮಾಡಿ ಅಥವಾ ವೆಬ್ಸೈಟ್ನಲ್ಲಿ ತಮ್ಮ ಅಗತ್ಯಗಳನ್ನು ನೋಂದಾಯಿಸಿಕೊಳ್ಳಬಹುದು. ಎಂಪ್ಲಾಯರ್ ರಿಲೇಶನ್ಸ್ ಟೀಮ್ ಅವರಿಗೆ ಅಗತ್ಯ ಮಾಹಿತಿ ರವಾನಿಸುತ್ತದೆ. ಕಂಪನಿ ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಬಹುದು. ಈ ಸೇವೆಗಾಗಿ ನಿಗದಿತ ಮೊತ್ತವನ್ನು ಬಾಬಾಜಾಬ್ಗೆ ಪಾವತಿಸಬೇಕು. ನಿರುದ್ಯೋಗಿಗಳಿಗೆ ಉಚಿತ ಸೇವೆ ಒದಗಿಸುವ ಸಂಸ್ಥೆಗೆ ಉದ್ಯೋಗದಾತ ಕಂಪನಿಗಳು ನೀಡುವ ಶುಲ್ಕವೇ ಆದಾಯದ ಮೂಲ.
ಪಾರ್ಟ್ಟೈಮ್ಗೆ ಭರ್ಜರಿ ಅವಕಾಶ
ಬೆಂಗಳೂರಿನಲ್ಲಿ ಪಾರ್ಟ್ಟೈಮ್ ಉದ್ಯೋಗಗಳಿಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ಅಂಜನ್ಕುಮಾರ್. ಮೆಕ್ಡೊನಾಲ್ಡ್, ಕಾಫಿ ಡೇ ಮೊದಲಾದ ಕಡೆ ಸಂಜೆ 5ರಿಂದ ರಾತ್ರಿ 11ರವರೆಗೆ ದುಡಿಯಲು ಇಷ್ಟಪಡುವವರಿಗೆ ಸಿಕ್ಕಾಪಟ್ಟೆ ಅವಕಾಶಗಳಿವೆ. ಅರೆಕಾಲಿಕ ನೌಕರರು ಅಗತ್ಯ ಇರುವಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ ಎನ್ನುತ್ತಾರೆ ಅವರು. ಕಲಿಯುತ್ತಲೇ ದುಡಿಯಲು ಬಯಸುವವರಿಗೆ, ಬೆಳಗಿನ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ದುಡಿದು ಮತ್ತಷ್ಟು ಸಂಪಾದಿಸಲು ಇಚ್ಛಿಸುವವರು ಇದರ ಅನುಕೂಲ ಪಡೆದುಕೊಳ್ಳಬಹುದು ಎನ್ನುತ್ತಾರೆ ಅವರು.
ಕ್ರಾಂತಿಯ ಕನಸು
ನಮ್ಮ ಗುರಿ ಭಾರತದ ಅಸಾಂಪ್ರದಾಯಿಕ ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡುವುದು. ಉದ್ಯೋಗ ಹುಡುಕುವವರು ಮತ್ತು ಉದ್ಯೋಗದಾತರಿಬ್ಬರಿಗೂ ಬಾಬಾಜಾಬ್ ಒಂದೇ ಸೂರಿನ ತಾಣವಾಗಿದೆ. ನಾವು ಉದ್ಯೋಗ ಹುಡುಕುವವರನ್ನು ಸೂಕ್ತ ಉದ್ಯೋಗದಾತರ ಜತೆ; ಉದ್ಯೋಗಿಗಳು ಬೇಕಿರುವವರಿಗೆ ಅವರ ಅಗತ್ಯಕ್ಕೆ ತಕ್ಕಂತಹ ಅಭ್ಯರ್ಥಿಗಳ ಜತೆ ಸಂಪರ್ಕ ಕಲ್ಪಿಸುತ್ತೇವೆ.
- ಶೇನ್ ಬ್ಲಾಗ್ಸ್ ವೆಡ್ತ್, ಬಾಬಾಜಾಬ್ ಸ್ಥಾಪಕ
ಸಂಪರ್ಕ ಹೇಗೆ?
ಉದ್ಯೋಗಾಕಾಂಕ್ಷಿಗಳಿಗೆ
- 55444 (ಎಸ್ಎಂಎಸ್) 08067683777 (ಮಿಸ್ಡ್ಕಾಲ್)
ಕಂಪನಿಗಳಿಗೆ: 888046111
ವೆಬ್ಸೈಟ್: www.babajob.com
- ರಾಜೇಶ ಮುಂಡಿಗೇಸರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


